ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ
ಲಂಡನ್: ನೆರೆ ರಾಷ್ಟ್ರಗಳೊಂದಿಗೆ ಉದ್ವಿಗ್ನ ಪರಿಸ್ಥಿತಿಯಿರುವುದನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ, ಭಾರತದೊಂದಿಗೆ ಯುದ್ಧ ಆಯ್ಕೆಯಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಯುವವರೆಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಉದ್ವಿಗ್ನವಾಗಿಯೇ ಇರಲಿದೆ. ಆದರೆ ಇದಕ್ಕೆ ಯುದ್ಧ ಮಾಡುವುದು ಆಯ್ಕೆಯಲ್ಲ ಎಂದು ಅವರು ಕಳೆದ ಶನಿವಾರ ದಕ್ಷಿಣ ಏಷ್ಯಾ ಕೇಂದ್ರದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪಾಕಿಸ್ತಾನದ ಭವಿಷ್ಯ-2017 ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದರು.
ಸ್ವತಂತ್ರ ಕಾಶ್ಮೀರ ಎಂಬ ಪರಿಕಲ್ಪನೆ ಪದೇ ಪದೇ ಕೇಳಿಬರುತ್ತದೆ ಆದರೆ ಇದರಲ್ಲಿ ವಾಸ್ತವಾಂಶವೇ ಇಲ್ಲ ಎಂದು ಅಬ್ಬಾಸಿ ಹೇಳಿರುವುದಾಗಿ ಜಿಯೊ ಟಿವಿ ವರದಿ ಮಾಡಿದೆ. ಸ್ವತಂತ್ರ ಕಾಶ್ಮೀರದ ಬೇಡಿಕೆಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂದರು.
ಕಾಶ್ಮೀರ ಮಾತುಕತೆಯೊಂದೇ ಈ ನಿಟ್ಟಿನಲ್ಲಿ ಆಶಾವಾದದ ಹಾದಿಯಾಗಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ತನ್ನ ದೇಶದಲ್ಲಿಯೇ ಉಗ್ರಗಾಮಿ ಸಂಘಟನೆಗಳ ಹುಟ್ಟು ಮತ್ತು ಬೆಳವಣಿಗೆ ವಿರುದ್ಧ ನಡೆಸುವ ಹೋರಾಟದ ಬಗ್ಗೆ ಮಾತನಾಡಿದ ಪ್ರಧಾನಿ ಅಬ್ಬಾಸಿ, ಭಯೋತ್ಪಾದನೆಯನ್ನು ತೊಲಗಿಸಲು ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ಯುದ್ಧ ಮಾಡುತ್ತಿದೆ. ನಮ್ಮ ಸೇನೆಯ ಒಂದು ಭಾಗ ಅದರ ವಿರುದ್ಧ ಹೋರಾಟ ನಡೆಸುತ್ತಿದೆ. ಅದರಲ್ಲಿ ಪಾಕಿಸ್ತಾನ ಗೆದ್ದಿದೆ ಎಂದರು.
ಪಾಕಿಸ್ತಾನದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಖಾಸಗಿ ವ್ಯಕ್ತಿಗಳ ಬಳಿಯಲ್ಲಿ ಕೂಡ 0.5 ದಶಲಕ್ಷ ಸ್ವಯಂಚಾಲಿತ ಶಸ್ತಾಸ್ತ್ರಗಳಿವೆ. ಇದನ್ನು ತೊಲಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಕಳೆದ ಮಧ್ಯಂತರ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ 35,000 ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಿಡುಗಡೆ ಮಾಡಿತ್ತು ಎಂದರು.
ಪಾಕಿಸ್ತಾನ-ಅಮೆರಿಕ ನಡುವಣ ಸಂಬಂಧವನ್ನು ಅಫ್ಘಾನಿಸ್ತಾನವೊಂದೆ ವ್ಯಾಖ್ಯಾನಿಸಬಾರದು ಎಂದು ಅವರು ಹೇಳಿದರು.