ವಿದೇಶ

31ನೇ ಅಷಿಯಾನ್ ಶೃಂಗಸಭೆಗೆ ವಿದ್ಯುಕ್ತ ಚಾಲನೆ, ಪ್ರಧಾನಿ ಮೋದಿ ಸೇರಿ ವಿಶ್ವ ನಾಯಕರು ಭಾಗಿ

Srinivasamurthy VN
ಮನಿಲಾ: ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿ ಆಯೋಜನೆಗೊಂಡಿರುವ 31ನೇ ಅಷಿಯಾನ್ ಶೃಂಗಸಭೆಗೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಅಷಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಫಿಲಿಪ್ಪೈನ್ಸ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ, ಶೃಂಗಸಭೆಯ ಎರಡನೇ ದಿನ ಅಂದರೆ ಮಂಗಳವಾರ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ವಿಯೆಟ್ನಾಂ ಪ್ರಧಾನಿ ನ್ಗುಯೆನ್ ಕ್ಸುವಾನ್ ಫುಸ್, ನ್ಯೂಜಿಲೆಂಡ್ ಪ್ರಧಾನಿ ಜಕಿಂಡಾ ಅರ್ಡೆರ್ನ್ ಹಾಗೂ ಬ್ರೂನಿ ಸುಲ್ತಾನ್ ಹಾಸನಲ್ ಅವರನ್ನೂ ಮೋದಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. 
ಭಾರತ-ಆಷಿಯಾನ್‌ ಶೃಂಗದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಫಿಲಿಪ್ಪಿನ್ಸ್‌ಗೆ ತೆರಳು ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, "ಇದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಷಿಯಾನ್‌) ಸದಸ್ಯ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸುವ ದೇಶದ ಬದ್ಧತೆ ಸೂಚಿಸುತ್ತದೆ. ತಮ್ಮ ಮನಿಲಾ ಭೇಟಿಯು ಫಿಲಿಪ್ಪಿನ್ಸ್‌ನೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ, ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಸೇರಿದಂತೆ ಇತರೆ ನಾಯಕರೊಂದಿಗಿನ ಮಾತುಕತೆಗೆ ತಾವು ಉತ್ಸುಕ"ರಾಗಿರುವುದಾಗಿ ತಿಳಿಸಿದ್ದರು.
ಆಷಿಯಾನ್‌- ಭಾರತ ಶೃಂಗದ ಹೊರತಾಗಿ ಏಷಿಯಾನ್‌ ಉದ್ಯಮ ಮತ್ತು ಹೂಡಿಕೆ ಶೃಂಗ, ಪೂರ್ವ ಏಷ್ಯಾ ಶೃಂಗ, ಆಷಿಯಾನ್‌ನ 50ನೇ ವರ್ಷಾಚರಣೆ, ಪ್ರಾದೇಶಿಕ ಆರ್ಥಿಕ ವಿಸ್ತಾರ ಪಾಲುದಾರಿಕೆ ನಾಯಕರ ಸಭೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಇಂದಿರಾ ಬಳಿಕ 36 ವರ್ಷಗಳ ನಂತರ ಮನಿಲಾಗೆ ಕಾಲಿಟ್ಟ ಮೊದಲ ಭಾರತ ಪ್ರಧಾನಿ
ಇನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಂತರ ಬರೋಬ್ಬರಿ 36 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಫಿಲಿಫೈನ್ಸ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. 
SCROLL FOR NEXT