ಹರಾರೆ: ಕಳೆದ ವಾರ ನಡೆದ ಕ್ಷಿಪ್ರ ಸೇನಾಕ್ರಾಂತಿಯ ಬಳಿಕ ಅಧಿಕಾರ ಕಳೆದುಕೊಂಡು ಗೃಹ ಬಂಧನದಲ್ಲಿರುವ ಜಿಂಬಾಂಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೇ ಮೊದಲ ಬಾರಿಗೆ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು ಎಂದು ಸೇನೆಗೆ ಹೇಳಿದ್ದಾರೆ.
ಜಿಂಬಾಂಬ್ವೆಯಲ್ಲಿ ಉಂಟಾಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಅಲ್ಲಿನ ಸೇನೆ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದ್ದು, ಅಧಿಕಾರವಿಲ್ಲದೆ, ಹುದ್ದೆಯಲ್ಲಿ ಉಳಿದುಕೊಂಡಿರುವ ಜಿಂಬಾಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಪದಚ್ಯುತಿಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆ ಆಡಳಿತಾರೂಢ ಝಡ್‌ಎಎನ್‌ಯು-ಪಿಎಫ್ ಪಕ್ಷವು ತುರ್ತು ಸಭೆ ನಡೆಸಿ, 93 ವರ್ಷ ವಯಸ್ಸಿನ ಮುಗಾಬೆ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕಿತ್ತುಹಾಕಿದೆ.
ಕಳೆದ ವಾರ ಜಿಂಬಾಬ್ವೆಯಲ್ಲಿ ನಡೆದ ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ಸೇನೆಯು ಮುಗಾಬೆ ಅವರ ಎಲ್ಲಾ ಅಧಿಕಾರಗಳನ್ನು ಕಸಿದುಕೊಂಡು ಗೃಹಬಂಧನದಲ್ಲಿರಿಸಿತ್ತು. 93 ವರ್ಷ ವಯಸ್ಸಿನ ಮುಗಾಬೆ ತನ್ನ ಪತ್ನಿ ಗ್ರೇಸ್ ಅವರನ್ನು ಉತ್ತರಾಧಿಕಾರಿಯಾಗಿಸಲು ಹವಣಿಸಿದ್ದೇ ಸೇನೆಯ ಕೆಂಗಣ್ಣಿಗೆ ಕಾರಣ ಎಂದು ಹೇಳಲಾಗುತ್ತಿದ್ದು, ತಮ್ಮ ಬಳಿಕ ತಮ್ಮ ಪತ್ನಿ ಗ್ರೇಸ್ ಅವರನ್ನು ಜಿಂಬಾಂಬ್ವೆ ಅಧ್ಯಕ್ಷೆಯಾಗಿ ಮಾಡಲು ಮುಗಾಬೆ ಮುಂದಾಗಿದ್ದರು ಎಂದು ಹೇಳಲಾಗಿದೆ.
ಇದೀಗ ಈ ಸಂಬಂಧ ಇದೇ ಮೊದಲ ಬಾರಿಗೆ ವಾಹಿನಿಗಳಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮುಗಾಬೆ, ಸೇನೆಯ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ. ಅಂತೆಯೇ ದೇಶದ ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ಅನಿವಾರ್ಯತೆ ಇದ್ದು, ತಾವು ರಾಜಿನಾಮೆ ನೀಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಂತೆಯೇ ಸಮಸ್ಯೆಗಳು ಏನೇ ಇದ್ದರೂ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಮುಗಾಬೆ ಹೇಳಿದ್ದಾರೆ.
ಮುಗಾಬೆಗೆ ಪಕ್ಷದಿಂದಲೇ ಗೇಟ್ ಪಾಸ್
ಉಪಾಧ್ಯಕ್ಷ ಮತ್ತು ಪಕ್ಷದ ಇತರೆ ಹಿರಿಯ ನಾಯಕರನ್ನು ಹೊರತು ಪಡಿಸಿ ತಮ್ಮ ಪತ್ನಿ ಗ್ರೇಸ್ ರನ್ನು ಮುಂದಿನ ಅಧ್ಯಕ್ಷೆಯನ್ನಾಗಿ ನೇಮಿಸ ಹೊರಟ ಮುಗಾಬೆ ಪ್ರಯತ್ನಕ್ಕೆ ಅವರದೇ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೀಗ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೇ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಪಕ್ಷದ ವಕ್ತಾರರೊಬ್ಬರು"ಪಕ್ಷದ ಅಧ್ಯಕ್ಷ ಹುದ್ದೆಯಿಂದ ಮುಗಾಬೆ ಅವರನ್ನು ಉಚ್ಚಾಟಿಸಲಾಗಿದ್ದು, ಗ್ರೇಸ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಎಮ್ಮರ್ಸನ್ ಮನಗಾವಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತೆಯೇ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಹುದ್ದೆಯಿಂದ ಗ್ರೇಸ್ ಅವರನ್ನೂ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ 37 ವರ್ಷಗಳಿಂದ ಜಿಂಬಾಂಬ್ವೆ ಅಧ್ಯಕ್ಷರಾಗಿ ಸರ್ವಾಧಿಕಾರಿ ಆಳ್ವಿಕೆ ನಡೆಸಿದ್ದ ಮುಗಾಬೆ ಅವರನ್ನು ಪತ್ನಿ ಗ್ರೇಸ್ ಹಾಗೂ ಅವರ ನಿಕಟವರ್ತಿಗಳು ದುರ್ಬಳಕೆ ಮಾಡಿಕೊಂಡರು. ಮುಗಾಬೆಯವರ ವೃದ್ಧಾಪ್ಯದ ಪರಿಸ್ಥಿತಿಯ ಲಾಭ ಮಾಡಿಕೊಂಡು ಅಧಿಕಾರವನ್ನು ಕಬಳಿಸಲು ಸಂಚು ನಡೆಸುತ್ತಿದ್ದಾರೆ ಹಾಗೂ ದೇಶದ ಸಂಪನ್ಮೂಲಗಳನ್ನು ಲೂಟಿಗೈಯುತ್ತಿದ್ದಾರೆಂದು ಝಡ್‌ಎಎನ್‌ಯು-ಪಿಎಫ್ ಪಕ್ಷದ ಪದಾಧಿಕಾರಿ ಓಬರ್ಟ್ ಮಪೊಫು ತಿಳಿಸಿದ್ದಾರೆ.