ಟೋಕಿಯೋ: 11 ಸಿಬ್ಬಂದಿ ಪ್ರಯಾಣಿಸುತ್ತಿದ್ದ ಅಮೆರಿಕ ನೌಕಾಪಡೆಯ ವಿಮಾನವೊಂದು ಬುಧವಾರ ಪೆಸಿಫಿಕ್ ಸಮುದ್ರದಲ್ಲಿ ಪತನಗೊಂಡಿದೆ ಎಂದು ನೌಕಾಪಡೆ ತಿಳಿಸಿದೆ.
ದೈನಂದಿನ ಹಾರಾಟ ಮುಗಿಸಿ ಯುಎಸ್‌ಎಸ್ ರೊನಾಲ್ಡ್ ರೇಗನ್ ಏರ್‌ಕ್ರಾಫ್ಟ್ ಕ್ಯಾರಿಯರ್ (ವಿಮಾನ ಸಾಗಣೆ ನೌಕೆ)ಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಎಂಟು ಸಿಬ್ಬಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಜಪಾನ್ ರಕ್ಷಣಾ ಸಚಿವ ವರದಿಗಾರರಿಗೆ ತಿಳಿಸಿದ್ದಾರೆ. ಆದರೆ ಆ ಎಂಟು ಸಿಬ್ಬಂದಿಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಪಾನ್‌ನಲ್ಲಿರುವ ಅಮೆರಿಕದ ನೌಕಾನೆಲೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಪಾನ್ ಕಾಲಮಾನದ ಪ್ರಕಾರ ಮಧ್ಯಾಹ್ನ 2:45ರ ವೇಳೆಗೆ ಈ ದುರಂತ ಸಂಭವಿಸಿದೆ. ಆಗ ಏರ್‌ಕ್ರಾಫ್ಟ್ ಕ್ಯಾರಿಯರ್ ಹಡಗು ಫಿಲಿಪ್ಪೀನ್ಸ್ ಸಮುದ್ರದಲ್ಲಿತ್ತು ಎನ್ನಲಾಗಿದೆ.