ವಾಷಿಂಗ್ಟನ್: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮತ್ ಉದ್ ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ನನ್ನು ಈ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.
ಹಫೀಸ್ ಸಯೀದ್ ನನ್ನು ಈ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಅಮೆರಿಕ ಸೂಚನೆ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಮುಖಭಂಗಕ್ಕೀಡಾಗಿದೆ. ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ದಾಳಿಗಳಲ್ಲಿ ನೂರಾರು ವಿದೇಶಿಗರು, ಮುಗ್ಧ ನಾಗರಿಕರು ಮೃತಪಟ್ಟಿದ್ದು ಇದರ ಹೊಣೆಗಾರಿಕೆ ಹೊತ್ತು ಸಯೀದ್ ನನ್ನು ಬಂಧಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ರಾಜ್ಯ ಇಲಾಖೆ ವಕ್ತಾರ ಹೀದರ್ ನೌರ್ಟ್ ಹೇಳಿದ್ದಾರೆ.
ಸಾಕ್ಷ್ಯಾಧಾರ ಕೊರತೆ ನೀಡಿ ಪಾಕಿಸ್ತಾನದ ಲಾಹೋರ್ ಕೋರ್ಟ್ 10 ತಿಂಗಳ ಗೃಹ ಬಂಧನದಿಂದ ಹಫೀಜ್ ಸಯೀದ್ ನನ್ನು ಮುಕ್ತಗೊಳಿಸಿತ್ತು. ಇದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಭಯೋತ್ಪಾದನೆಯನ್ನು ರಕ್ಷಿಸಲು ಮತ್ತು ಬೆಂಬಲಿಸುವ ತನ್ನ ಚಾಳಿಯನ್ನು ಪಾಕಿಸ್ತಾನ ಬದಲಿಸಿಲ್ಲ. ಇದರಿಂದ ಪಾಕಿಸ್ತಾನದ ನಿಜ ಮುಖ ಬಯಲಾಗಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಪಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಜೆಯುಡಿ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಹಫೀಜ್ ಸಯೀದ್ ನೊಂದಿಗೆ ಆತನ ಸಹಚರರಾದ ಅಬ್ದುಲ್ ರೆಹಮಾನ್ ಅಬಿದ್ ಹಾಗೂ ಖಾಝಿ ಕಶಿಫ್ ಹುಸೇನ್ ನ್ನು ಪಂಜಾಬ್ ಸರ್ಕಾರ 1997 ರ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ 90 ದಿನಗಳು ಬಂಧಿಸಿಟ್ಟಿತ್ತು. ಜೆಯುಡಿ ಉಗ್ರ ಸಂಘಟನೆ ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಭಾಗವಾಗಿದ್ದು, 2008ರ ಮುಂಬೈ ದಾಳಿಗೆ ಇದೇ ಉಗ್ರ ಸಂಘಟನೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics