ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇವಾಂಕಾ ಟ್ರಂಪ್
ವಾಷಿಂಗ್ಟನ್ ಡಿಸಿ: ಹೈದರಾಬಾದ್ ನಲ್ಲಿ ನಡೆದ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆ(ಜಿಇಎಸ್) ಮನಸಾರೆ ಶ್ಲಾಘಿಸಿರುವ ಅಮೆರಿಕಾ ಸರ್ಕಾರ, ಸಮಾವೇಶದ ಯಶಸ್ಸು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಸೂಚನೆಯಾಗಿದೆ ಎಂದು ಹೇಳಿದೆ.
ಜಿಇಎಸ್ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಹೇಳಿರುವ ಅಮೆರಿಕಾ ಸರ್ಕಾರದ ವಕ್ತಾರೆ ಹೀದರ್ ನೌರ್ಟ್, ಹೈದರಾಬಾದ್ ನಲ್ಲಿ ಭಾರತ ಮತ್ತು ಅಮೆರಿಕಾ ಒಟ್ಟಿಗೆ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯನ್ನು ನಡೆಸಿರುವುದ ತುಂಬಾ ಖುಷಿ ಕೊಟ್ಟಿದೆ. ವಿಶ್ವದಾದ್ಯಂತ ಸಮಾರು 1,500 ಉದ್ಯಮಿಗಳನ್ನು ಒಂದೇ ವೇದಿಕೆಯಡಿ ತಂದಿರುವುದು ನಿಜಕ್ಕೂ ಸಮ್ಮೇಳನದ ಯಶಸ್ಸಾಗಿದೆ ಎಂದು ಹೇಳಿದ್ದಾರೆ.
ಭಾರತ-ಅಮೆರಿಕಾ ಸಂಬಂಧವನ್ನು ಶ್ಲಾಘಿಸಿರುವ ಅವರು,ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ನಮ್ಮ ನಿರಂತರ ಮಾತುಕತೆ ಉತ್ತರ ಕೊರಿಯಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗಬಹುದು. ಉತ್ತರ ಕೊರಿಯಾದಿಂದ ಕ್ಷಿಪಣಿ ಉಡಾವಣೆ ಜಾಗತಿಕ ಮಟ್ಟದಲ್ಲಿ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಭಾರತ ತನ್ನ ಪ್ರಯತ್ನವನ್ನು ಮತ್ತು ಸಹಕಾರವನ್ನು ಮುಂದುವರಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಸಮ್ಮೇಳನದಲ್ಲಿ ಅಮೆರಿಕಾ ನಿಯೋಗದ ಮುಂದಾಳತ್ವವನ್ನು ಇವಾಂಕಾ ಟ್ರಂಪ್ ವಹಿಸಿರುವುದರ ಬಗ್ಗೆ ಅವರು, ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ಟ್ರಂಪ್ ಪ್ರತಿನಿಧಿಸಿರುವುದರ ಬಗ್ಗೆ ನಮಗೆ ಹೆಮ್ಮೆಯಿದೆ. ಮಹಿಳಾ ಉದ್ಯಮಿಗಳ ಪ್ರತಿನಿಧಿಯಾಗಿ ಸಮ್ಮೇಳನಕ್ಕೆ ಹೋಗಲು ಇವಾಂಕಾ ಅವರಿಗಿಂತ ಉತ್ತಮ ಪ್ರತಿನಿಧಿ ಬೇರೆ ಇದ್ದರು ಎಂದು ನನಗನಿಸುವುದಿಲ್ಲ ಎಂದರು.