ವಿದೇಶ

ಡೊಕ್ಲಾಂ ನಲ್ಲಿ ಮತ್ತೆ ಚೀನಾ ಕ್ಯಾತೆ; ಚಳಿಗಾಲದ ವೇಳೆ ದೊಡ್ಡ ಪ್ರಮಾಣದ ಸೇನೆ ನಿಯೋಜನೆ

Srinivasamurthy VN
ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದಕ್ಕೆ ಮತ್ತೇ ಡ್ರಾಗನ್ ಸೇನೆ ತುಪ್ಪ ಸುರಿಯುವ ಕೆಲಸಕ್ಕೆ ಮುಂದಾಗಿದ್ದು, ವಿವಾದಿತ ಗಡಿಯಲ್ಲಿ ಚಳಿಗಾಲದಲ್ಲಿ ದೊಡ್ಡ  ಪ್ರಮಾಣದಲ್ಲಿ ಸೇನೆ ನಿಯೋಜಿಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಈ ಹಿಂದಿನ ಸಂಧಾನದ ಬಳಿಕವೂ ಚೀನಾ ಮತ್ತೆ ತನ್ನ ಕ್ಯಾತೆ ಮುಂದುವರೆಸಿದ್ದು, ಚಳಿಗಾಲದ ಸಂದರ್ಭದಲ್ಲಿ ಡೊಕ್ಲಾಂ ನಲ್ಲಿ ದೊಡ್ಡ ಪ್ರಮಾಣದ ಸೇನೆ ನಿಯೋಜನೆ ಮಾಡುವುದಾಗಿ ಚೀನಾ ಹೇಳಿಕೊಂಡಿದೆ. ಈ ಬಗ್ಗೆ ಚೀನಾ  ರಕ್ಷಣಾ ಸಚಿವಾಲಯದ ವಕ್ತಾರ ಕ.ವೂ. ಖಿಯಾನ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, 'ಡೋಕ್ಲಾಂ ಚೀನಾದ್ದು. ಈ ಕಾರಣದಿಂದ ಇಲ್ಲಿ ಸೇನೆಯನ್ನು ನಿಯೋಜಿಸಿದ್ದೇವೆ. ಚಳಿಗಾಲದ ಸಂದರ್ಭದಲ್ಲಿ ಮತ್ತಷ್ಟು ಸೇನೆ  ನಿಯೋಜಿಸುತ್ತೇವೆ ಎಂದು ಹೇಳುವ ಮೂಲಕ ಮತ್ತೆ ವಿವಾದವನ್ನು ಕೆದಕಿದ್ದಾರೆ. 
ಈ ಹಿಂದೆ ಉಭಯ ದೇಶಗಳ ಸಂಧಾನ ಮಾತುಕತೆ ಮೇರೆಗೆ, ಈ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ಮತ್ತು ಭಾರತ ದೇಶಗಳು ವಾಪಸ್ ಕರೆಸಿಕೊಂಡಿತ್ತು. ಇದಕ್ಕೂ ಮೊದಲು ಈ ಭಾಗದಲ್ಲಿ ಭಾರತ ಮತ್ತು ಚೀನಾ  ಸೈನಿಕರು ಪರಸ್ಪರ ವಾಗ್ವಾದ ನಡೆಸಿದ್ದರಲ್ಲದೇ ಕೈಕೈ ಮಿಲಾಯಿಸಿದ್ದರು. ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಚೀನಾ ಸೈನಿಕರು ಕಲ್ಲು ತೂರಾಟ ಕೂಡ ಮಾಡಿದ್ದರು. ಸುಮಾರು 73 ದಿನಗಳ ಕಾಲ ಹಗ್ಗ ಜಗ್ಗಾಟ ನಡೆದು,  ನಂತರ ಈಶಾನ್ಯ ಭಾಗದೊಂದಿಗೆ ಭಾರತವನ್ನು ಸೇರಿಸುವ ಭಾಗದಲ್ಲಿ ನಿಯೋಜಿಸಿದ್ದ ಸೇನೆಯನ್ನು ಚೀನಾ ಆಗಸ್ಟ್ 28ರಂದು ಹಿಂಪಡೆದಿತ್ತು. ಈ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೂಡ  ಸ್ಥಗಿತಗೊಳಿಸಿತ್ತು.
SCROLL FOR NEXT