ವಿದೇಶ

ಲಾಸ್ ವೆಗಾಸ್ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: 50 ಸಾವು, 200 ಕ್ಕೂ ಹೆಚ್ಚು ಮಂದಿಗೆ ಗಾಯ

Lingaraj Badiger
ಲಾಸ್ ವೆಗಾಸ್: ಅಮೆರಿಕದ ಲಾಸ್ ವೆಗಾಸ್ ನಲ್ಲಿ ಭಾನುವಾರ ರಾತ್ರಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಮತ್ತು 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಯೊಬ್ಬ ಮಂಡಾಲೇ ಬೇ ಕ್ಯಾಸಿನೋದಲ್ಲಿ ನಡೆಯುತ್ತಿದ್ದ ಓಪನ್‌ ಸ್ಟೇಜ್‌ ಮ್ಯೂಸಿಕ್‌ ಫೆಸ್ಟಿವಲ್‌ ಗುರಿಯಾಗಿರಿಸಿಕೊಂಡು ಪಕ್ಕದ ಕಟ್ಟಡದೊಳಗಿಂದ ಮನ ಬಂದಂತೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು, ಭದ್ರತಾ ಪಡೆಗಳು ಸಭಾಂಗಣವನ್ನು ಸುತ್ತುವರಿದು, ಗುಂಡಿನ ದಾಳಿ ನಡೆಸಿದ ಸ್ಟಿಫನ್ ಪ್ಯಾಡಾಕ್ ನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡ ಹಲವಾರು ಜನರನ್ನು ಲಾಸ್ ವೆಗಾಸ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತಾಗಿ ನನಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬಂದಿಲ್ಲ ಎಂದು ಯುನಿವರ್ಸಿಟಿ ಮೆಡಿಕಲ್ ಸೆಂಟರ್ ನ  ವಕ್ತಾರ ಡ್ಯಾನಿಟಾ ಕೋಹೆನ್ ಅವರು ಹೇಳಿದ್ದಾರೆ.
ಇದೊಂದು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಲಾಸ್‌ ವೆಗಾಸ್‌ನ ಪೊಲೀಸ್‌ ಮುಖ್ಯಸ್ಥರು ತಿಳಿಸಿದ್ದಾರೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಸ್ ವೆಗಾಸ್ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಕೆಲ ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. 
SCROLL FOR NEXT