ಲಾಹೋರ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನನ್ನು ರಕ್ಷಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದ್ದು ಅವನ ವಿರುದ್ಧ ಕೋರ್ಟ್ ಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಳಂಬ ಮಾಡುತ್ತಿದೆ. ಇದರಿಂದಾಗಿ ಸಯೀದ್ ನನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಜಗತ್ತಿನ ಹಲವು ನಾಯಕರು ಭಯೋತ್ಪಾದನೆಯ ವಿರುದ್ಧ ಧನಿ ಎತ್ತುತ್ತಿದ್ದು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಜರಿದಿದ್ದು ಆಯಿತು. ಇದರಿಂದಾಗಿ ತಾನು ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸುವ ಪಾಕ್ ತೆರೆಮರೆಯಲ್ಲಿ ಅವರಿಗೆ ರಕ್ಷಣೆ ನೀಡುತ್ತಿರುವುದು ಬಟಾಬಯಲಾಗಿದೆ.
ಪಾಕಿಸ್ತಾನ ಸರ್ಕಾರ ಹಫೀಜ್ ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಬಂಧಿಸಿದ್ದು ಭಯೋತ್ಪಾದನಾ ವಿರೋಧಿ ಕಾಯ್ದೆಯನ್ವಯ ಬಂಧಿತರಾಗಿರುವ ಅವರನ್ನು ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಿದೆ. ಹಫೀಜ್ ತನ್ನ ಬಂಧನ ಪ್ರಶ್ನಿಸಿ ಲಾಹೋರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ಕೋರ್ಟ್ ಹಫೀಜ್ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು.
ಈ ಸಂಬಂಧ ನಿನ್ನೆ ನಡೆದ ವಿಚಾರಣೆ ವೇಳೆ ಹಫೀಜ್ ವಿರುದ್ಧ ಪಾಕಿಸ್ತಾನ ಆಂತರಿಕ ಸಚಿವಾಲಯದ ಕಾರ್ಯದರ್ಶಿ ಸಾಕ್ಷ್ಯಾಧಾರಗಳನ್ನು ಕೋರ್ಟ್ ಗೆ ಸಲ್ಲಿಸಬೇಕಿತ್ತು. ಆದರೆ ಕಾರ್ಯದರ್ಶಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಪಾಕಿಸ್ತಾನ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು ಶೀಘ್ರ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸೂಚಿಸಿದೆ. ಒಂದು ಪಕ್ಷದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಸಾಧ್ಯವಾಗದೆ ಹೋದರೆ ಆತನನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಯ್ಯದ್ ಮಜಹರ್ ಅಲಿ ಅಕ್ಬರ್ ನಖ್ವಿ ತಿಳಿಸಿದ್ದಾರೆ.