ವಾಷಿಂಗ್ಟನ್: ಹೆಚ್-1ಬಿ ವೀಸಾ ಕುರಿತ ಅಮೆರಿಕ ನಿಲುವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತೀಯರು ಆರ್ಥಿಕ ವಲಸಿಗರಲ್ಲ ಎಂದು ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ ಅವರು, ಹೆಚ್ 1ಬಿ ವೀಸಾ ಮೂಲಕ ಅಮೆರಿಕದಲ್ಲಿರುವ ಭಾರತೀಯರು ಅಕ್ರಮ ಆರ್ಥಿಕ ವಲಸಿಗರಲ್ಲ. ಅವರೆಲ್ಲರೂ ಉನ್ನತ ಮಟ್ಟದ ವೃತ್ತಿಪರರಾಗಿದ್ದು, ಅವರ ಕುರಿತಂತೆ ಅಮೆರಿಕ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಅರುಣ್ ಜೇಟ್ಲಿ ಪಾಲ್ಗೊಂಡಿದ್ದು, ಈ ವೇಳೆ ಮಾಧ್ಯಮಗಳು ಅಮೆರಿಕದ ಹೆಚ್-1ಬಿ ವೀಸಾ ನೀತಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಇಲ್ಲಿರುವ ಭಾರತೀಯರು ಉನ್ನತ ಮಟ್ಟದ ವೃತ್ತಿಪರರಾಗಿದ್ದು, ಅಮೆರಿಕ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತೀಯರ ಅಪಾರ ಕೊಡುಗೆ ಇದೆ ಎಂಬುದನ್ನು ಮರೆಯಬಾರದು. ಅವರ್ಯಾರೂ ಅಮೆರಕಕ್ಕೆ ಅಕ್ರಮವಾಗಿ ಬಂದಿಲ್ಲ. ಇಲ್ಲಿನ ಸಂಸ್ಥೆಗಳ ಆಹ್ವಾನದ ಮೇರೆಗೆ ಕಾನೂನಾತ್ಮಕವಾಗಿ ಅವರು ಅಮೆರಿಕಕ್ಕೆ ಬಂದಿದ್ದಾರೆ. ಹೀಗಾಗಿ ಭಾರತೀಯರನ್ನು ಅಕ್ರಮ ವಲಸಿಗರು ಎಂಬಂತೆ ನೋಡಬಾರದು. ಅಕ್ರಮ ವಲಸಿಗರು ಎಂಬ ಭಾವನೆಯಿಂದಾಗಿ ಇಲ್ಲಿನ ಭಾರತೀಯರು ಅತಂಕದಲ್ಲಿದ್ದು, ಅಮೆರಿಕ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಜೇಟ್ಲಿ ಹೇಳಿದ್ದಾರೆ.
ಅಂತೆಯೇ ಅಮೆರಿಕ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ನಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು, ಅಮೆರಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯರ ಕೊಡುಗೆ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಮೆರಿಕ ಸರ್ಕಾರ ಕೂಡ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಜೇಟ್ಲಿ ಹೇಳಿದ್ದಾರೆ.