ವಿದೇಶ

ಭಾರತ ಅಮೆರಿಕದ ವಿಶ್ವಾಸಾರ್ಹ ಸ್ನೇಹಿತ ರಾಷ್ಟ್ರ: ಟಿಲ್ಲರ್ಸನ್

Srinivasamurthy VN
ವಾಷಿಂಗ್ಟನ್‌: ಜಾಗತಿಕ ಮಟ್ಟದಲ್ಲಿ ಕ್ರಮೇಣ ಬಲಾಢ್ಯವಾಗುತ್ತಿರುವ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ. 
ವಾಷಿಂಗ್ಟನ್‌ ನಲ್ಲಿ ಮಾತನಾಡಿದ ರೆಕ್ಸ್‌ ಟಿಲ್ಲರ್ಸನ್ ಅವರು‌, ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರವಾಗಿದ್ದು, ಅಸ್ಥಿರತೆ ಹಾಗೂ ತಲ್ಲಣದ ಪರಿಸ್ಥಿತಿಯಲ್ಲೂ ಸಾಥ್‌ ನೀಡುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಪರೋಕ್ಷವಾಗಿ  ಚೀನಾಗಿ ತಿವಿದ ಅವರು, "ಅಂತಾರಾಷ್ಟ್ರೀಯ ನೀತಿ-ನಿಯಮಗಳನ್ನು ಭಾರತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದೆ. ಆದರೆ ಚೀನಾ ಈ ವಿಷಯದಲ್ಲಿ ಸಾಕಷ್ಟು ಬಾರಿ ಉಲ್ಲಂಘನೆ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ  ಪ್ರಚೋದನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಚೀನಾ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತದೊಂದಿಗಿನ ನೀತಿಯ ಕುರಿತು ಅಮೆರಿಕ ಸ್ಪಷ್ಟನೆ ನೀಡಿದ್ದು, ಭಾರತ ತನ್ನ ಸಾರ್ವಭೌಮತೆಯನ್ನು  ಕಾಪಾಡಿಕೊಳ್ಳುವುದರೊಂದಿಗೆ ನೆರೆ ರಾಷ್ಟ್ರಗಳ ಭಾವನೆಗಳಿಗೂ ಬೆಲೆ ನೀಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಟಿಲ್ಲರ್ಸನ್‌ ಹೇಳಿದ್ದಾರೆ.
ಅಂತೆಯೇ ಭಾರತ ಮತ್ತು ಅಮೆರಿಕ ರಚನಾತ್ಮಕ ಪಾಲುದಾರಿಕೆಗೆ ಒತ್ತು ನೀಡಬೇಕಾಗಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟ, ಸೈಬರ್‌ ಅಪರಾಧಗಳನ್ನು ಮಟ್ಟ ಹಾಕಲು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು  ಟಿಲ್ಲರ್ಸನ್ ಅಭಿಪ್ರಾಯಪಟ್ಟರು. 
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್‌ ಮುಂದಿನ ವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಟಿಲ್ಲರ್ಸನ್ ಅವರ ಭಾರತ ಪ್ರವಾಸ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಗಳಿವೆ.
SCROLL FOR NEXT