ಟೋಕಿಯೋ(ಜಪಾನ್): ಉತ್ತರ ಕೊರಿಯಾ ಸತತವಾಗಿ ಪರಮಾಣು ಬಾಂಬ್ ಪರೀಕ್ಷೆಗಳನ್ನು ನಡೆಸುತ್ತಿದ್ದು ಇತ್ತೀಚೆಗಷ್ಟೇ ನಡೆದ ಪರಮಾಣು ಪರೀಕ್ಷೆ ನಂತರ ಸುರಂಗವೊಂದು ಕುಸಿದ ಪರಿಣಾಮ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಪಾನ್ ಮಾಧ್ಯಮವೊಂದು ವರದಿ ಮಾಡಿದೆ.
ಸೆಪ್ಟೆಂಬರ್ 3ರಂದು ಉತ್ತರ ಕೊರಿಯಾ ಪುಂಗ್ಯೆ-ಹಿ ಪರಮಾಣು ಪರೀಕ್ಷಾ ಸ್ಥಳದ ಬಳಿ 23 ಕಿ.ಮೀ ನೆಲದಾಳದಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು. ಇದಾದ ಕೆಲ ದಿನಗಳ ಬಳಿಕ ಅಲ್ಲಿ ಸುರಂಗ ಕುಸಿದಿದ್ದು ಈ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಟಿವಿ ಅಸಾಯಿ ವರದಿ ಮಾಡಿದೆ.
ಪರಮಾಣು ಬಾಂಬ್ ಪರೀಕ್ಷೆ ನಡೆಸಲು ಈ ಸುರಂಗವನ್ನು ಕೊರೆಯಲಾಗಿತ್ತು. ಒಂದು ಸುರಂಗದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಸುರಂಗ ಕುಸಿದಿದೆ. ಮತ್ತೊಂದು ಸುರಂಗ ಮಾರ್ಗವು ಕುಸಿದಿದ್ದರಿಂದ ಅಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ಈ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಜಪಾನ್ ಸರ್ಕಾರ ಒಡೆತನದ ಮಾಧ್ಯಮ ವರದಿ ಮಾಡಿದೆ.
ನೆಲದಾಳದಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆಸಿದ್ದರಿಂದ ಪರ್ವತಗಳು ಕುಸಿಯಲು ಮತ್ತು ಚೀನಾ ಗಡಿ ಬಳಿ ವಾತಾವರಣಕ್ಕೆ ವಿಕಿರಣಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾ 2006ರಿಂದೀಚೆಗೆ ಆರು ಬಾರಿ ಪರಮಾಣು ಪರೀಕ್ಷೆ ನಡೆಸಿದೆ. ಸೆಪ್ಟೆಂಬರ್ 3ರಂದು ನಡೆಸಿದ ಪರಮಾಣು ಬಾಂಬ್ ತೀವ್ರತೆ ಎಷ್ಟಿತ್ತೆಂದರೆ ಆ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದು ಎರಡನೇ ಮಹಾ ಯುದ್ಧದಲ್ಲಿ ಜಪಾನ್ ಮೇಲೆ ಅಮೆರಿಕ ಪ್ರಯೋಗಿಸಿದ ಅಣು ಬಾಂಬ್ ಗಿಂತ ಐದು ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ.