ಬ್ರಿಕ್ಸ್ ಸಮಾವೇಶದಲ್ಲಿ ವಿಶ್ವನಾಯಕರು
ಕ್ಸಿಯಾಮೆನ್: ಜಾಗತಿಕ ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳುವ ಮೂಲಕ ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ ಬ್ರಿಕ್ಸ್ ಸಮಾವೇಶ ಮುಕ್ತಾಯಗೊಂಡಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಾಯಕರು ಪಾಲ್ಗೊಂಡಿದ್ದ ಬ್ರಿಕ್ಸ್ ಸಮಾವೇಶ ಪೂರ್ಣಗೊಂಡಿದ್ದು, ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಾಮೂಹಿಕ ನಿರ್ಧಾರಕ್ಕೆ ವಿಶ್ವನಾಯಕರು ಬಂದಿದ್ದಾರೆ. ಇನ್ನು ಈ ಹಿಂದೆ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಚೀನಾ ಕೂಡ ಭಾರತದ ಸತತ ಒತ್ತಡಕ್ಕೆ ಮಣಿದಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತಾನೂ ಕೈ ಜೋಡಿಸುವುದಾಗಿ ಸ್ಪಷ್ಚಪಡಿಸಿದೆ. ಅಲ್ಲದೆ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್, ಲಷ್ಕರ್ ಇ ತೊಯ್ಬಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ವಿರುದ್ಧ ಬ್ರಿಕ್ಸ್ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಂತೆಯೇ ಈ ಬಾರಿ ಬ್ರಿಕ್ಸ್ ಸಮಾವೇಶದಲ್ಲಿ ಜಾಗತಿಕ ಭಯೋತ್ಪಾದನೆ ಮಾತ್ರವಲ್ಲದೇ ಸೈಬರ್ ಭದ್ರತೆ, ವಿಪತ್ತು ನಿರ್ವಹಣೆಯಲ್ಲಿ ಸಹಕಾರ, ಹಸಿರು ವಿಶ್ವ ನಿರ್ಮಾಣದ ಮೂಲಕ ಹವಾಮಾನ ಬದಲಾವಣೆ ಸಮಸ್ಯೆ ನಿಯಂತ್ರಣ ಸೇರಿದಂತೆ ಒಟ್ಟು 10 ಪ್ರಮುಖ ವಿಚಾರಗಳಲ್ಲಿ ಸಹಕಾರ ನೀಡುವ ನಿರ್ಣಯ ಕೈಗೊಳ್ಳಲಾಯಿತು.
ಕ್ಸಿಯಾಮೆನ್ ನಿಂದ ನೇರ ಮಯನ್ಮಾರ್ ನತ್ತ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ
ಇನ್ನು ಮಹತ್ವದ ಬ್ರಿಕ್ಸ್ ಸಮಾವೇಶ ಪೂರ್ಣಗೊಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಯನ್ಮಾರ್ ನತ್ತ ಪ್ರಯಾಣ ಬೆಳೆಸಿದರು. ಮಯನ್ಮಾರ್ ಗೆ ತೆರಳಿದ ಬಳಿಕ ಯಾಂಗೂನ್ ನ ಥುವಾನ್ನ ಒಳಂಗಾಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.