ಕ್ಸಿಯಾಮೆನ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ, ಹಸಿರುವ ವಿಶ್ವದ ನಿರ್ಮಾಣದ ಕುರಿತು ಮಾತನಾಡಿದ್ದು, ಇದಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ರಿಕ್ಸ್ ಸಮಾವೇಶದಲ್ಲಿ ಇಂದು ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರ ವಿಚಾರದ ಕುರಿತ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದ್ದು, ಮುಂದಿನ ಪೀಳಿಗೆಗೆ ಹಸಿರು ವಿಶ್ವವನ್ನು ನಿರ್ಮಾಣ ಮಾಡಬೇಕಿದೆ. ಇದು ಹವಾಮಾನ ಬದಲಾವಣೆಯ ಅಪಾಯವನ್ನು ತಗ್ಗಿಸುತ್ತದೆ. ಅಂತೆಯೆ ನಮ್ಮ ಅಭಿವೃದ್ಧಿ ಅಜೆಂಡಾ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎಂಬ ಘೋಷ ವ್ಯಾಕ್ಯದ ಮೇಲೆ ನಿಂತಿರಬೇಕು ಎಂದು ಹೇಳಿದರು.
ಎಲ್ಲ ರಾಷ್ಟ್ರಗಳೂ ಕೂಡಿ ಬಾಳುವ ಮತ್ತು ಅತ್ಯಂತ ಕಡು ಬಡವ ಕೂಡ ಆರ್ಥಿಕ ಮುಖ್ಯವಾಹಿನಿಗೆ ಬರುವಂತಹ ಅಂತರ್ಗತ ಜಗತ್ತಿನ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಂತೆಯೇ ದಕ್ಷಿಣ ಆಫ್ರಿಕಾ ದೇಶದೊಂದಿಗಿನ ಭಾರತದ ಸಹಭಾಗಿತ್ವವನ್ನು ಕೊಂಡಾಡಿದ ಪ್ರಧಾನಿ ಮೋದಿ, ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟದ ಬಗ್ಗೆ ಮಾತನಾಡಿದರು. ಅಂತೆಯೇ ಭಯೋತ್ಪಾದನೆ ನಿಗ್ರಹಕ್ಕೆ ಸಂಘಟಿತ ಕ್ರಮ ಮತ್ತು ಸಹಕಾರ ಅತ್ಯಗತ್ಯ ಎಂದ ಮೋದಿ, ಸೈಬರ್ ಭದ್ರತೆ ಹಾಗೂ ದುರಂತ ನಿರ್ವಹಣೆಯಲ್ಲಿ ಸಹಕಾರ ಬೇಕು ಎಂದು ಹೇಳಿದರು.