ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
ಕ್ಸಿಯಾಮೆನ್: ಏಷ್ಯಾ ಖಂಡದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ದೇಶಗಳು ಪಂಚಶೀಲ ಒಪ್ಪಂದದ ಮಾರ್ಗದರ್ಶನ ಪ್ರಕಾರ ಜತೆಗೂಡಿ ಶ್ರಮಿಸಲು ಸಿದ್ಧ ಎಂದು ಹೇಳಿವೆ.
ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಭೇಟಿ ಮಾಡಿ ಚರ್ಚಿಸಿದರು. ಚೀನಾ ಮತ್ತು ಭಾರತ ದೇಶಗಳ ನಡುವೆ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶದ ನಾಯಕರು ಪರಸ್ಪರ ಚರ್ಚೆ ನಡೆಸುತ್ತಿದ್ದು, ಈ ವೇಳೆ ಗಡಿ ವಿಚಾರ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ಬೆನ್ನಲ್ಲೇ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ದೇಶಗಳು ಏಷ್ಯಾ ಖಂಡದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಪರಸ್ಪರ ಸಹಕಾರದೊಂದಿಗೆ ಶ್ರಮಿಸುವ ಸಂಕಲ್ಪ ಮಾಡಿವೆ.
ಈ ವೇಳೆ ಮಾತನಾಡಿದ ಚೀನಾ ಅಧ್ಯಕ್ಷ ಜಿನ್ ಪಿಂಗ್, "ಭಾರತ ಮತ್ತು ಚೀನ ಏಷ್ಯಾದ ಎರಡು ದಿಗ್ಗಜ ರಾಷ್ಟ್ರಗಳಾಗಿದ್ದು, ಅತ್ಯಂತ ಬಲಿಷ್ಠ ನೆರೆಹೊರೆಯ ದೇಶಗಳಾಗಿವೆ. ಮಾತ್ರವಲ್ಲದೆ ಈ ಎರಡೂ ದೇಶಗಳು ವಿಶ್ವದ ಅತೀ ದೊಡ್ಡ ಮತ್ತು ನೂತನ ಪ್ರಬಲ ಆರ್ಥಿಕ ಶಕ್ತಿಗಳಾಗಿ ಮೂಡಿ ಬರುತ್ತಿರುವ ರಾಷ್ಟ್ರಗಳಾಗಿವೆ ಎಂದು ಹೇಳಿದರು. ಅಂತೆಯೇ ಐತಿಹಾಸಿಕ ಪಂಚಶೀಲ ಒಪ್ಪಂದದ ಐದು ತತ್ವಗಳಿಂದ ಮಾರ್ಗದರ್ಶನ ಪಡೆದು ಭಾರತದೊಂದಿಗೆ, ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಹಾಗೂ ಉಭಯ ದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯಲು ಚೀನಾ ಸಿದ್ದವಿದೆ ಎಂದು ಜಿನ್‌ಪಿಂಗ್ ಹೇಳಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಚೀನಾ ಪಂಚಶೀಲ ತತ್ವದಡಿ ದುಡಿಯುವ ಬಯಕೆ ವ್ಯಕ್ತಪಡಿಸಿದೆ. ಉಭಯ ರಾಷ್ಟ್ರಗಳು ಪರಸ್ಪರ ಗೌರವದಿಂದ ತಮ್ಮ ತಮ್ಮ ಗಡಿ ರಕ್ಷಣೆ ಮಾಡಬೇಕಿದೆ. ಅಂತೆಯೇ ಪರಸ್ಪರರ ಸಮಗ್ರತೆಯನ್ನು ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಹೇಳಿದರು. ಅಂತೆಯೇ ಮೊದಲಿಗೆ ನಾನು ಬ್ರಿಕ್ಸ್ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಚೀನಾವನ್ನು ಶ್ಲಾಘಿಸುತ್ತೇನೆ. ಬ್ರಿಕ್ಸ್ ಸಮಾವೇಶ ಜಾಗತಿಕ ಸನ್ನಿವೇಶ ಬದಲಾವಣೆಗೆ ನೆರವಾಗಲಿದೆ ಎಂದು ಭಾವಿಸುತ್ತೇನೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಚೀನಾ ನಿಯೋಗದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಮುಖ್ಯ ವಕ್ತಾರ ಲೂ ಕಾಂಗ್, ವಿದೇಶ ಸಚಿವ ವಾಂಗ್ ಯೀ ಮತ್ತು ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಶೀ ಇದ್ದರು.