ಬೀಜಿಂಗ್: ಚೀನಾದ ಕ್ಸಿಯಾಮೆನ್ ನಲ್ಲಿ ಮುಕ್ತಾಯಗೊಂಡ ಬ್ರಿಕ್ಸ್ ಸಮಾವೇಶ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ರಕ್ಷಣಾ ತಜ್ಞರು ಬಣ್ಣಿಸಿದ್ದಾರೆ.
ಬ್ರಿಕ್ಸ್ ಸಮಾವೇಶಕ್ಕೆ ಮೊದಲು ಪಾಕಿಸ್ತಾನ ವಿಚಾರ ಪ್ರಸ್ತಾಪಿಸದಂತೆ ಭಾರತಕ್ಕೆ ಹೇಳಿದ್ದ ಅದೇ ಚೀನಾ ಬ್ರಿಕ್ಸ್ ಸಮಾವೇಶದ ವೇಳೆ ಭಾರತದ ಚಾಣಾಕ್ಷ ನಡೆಯಿಂದಾಗಿ ಸಮಾವೇಶದಲ್ಲಿ ಭಯೋತ್ಪಾದನೆ ಮತ್ತು ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ನಿರ್ಣಯಕ್ಕೆ ತನ್ನ ಬೆಂಬಲ ನೀಡಿತು. ಇದು ಭಾರತದ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ರಕ್ಷಣಾ ತಜ್ಞರು ಬಣ್ಣಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಖ್ಯಾತ ರಕ್ಷಣಾ ತಜ್ಞ ಪಿಕೆ ಸೆಹಗಲ್ ಅವರು, ಭಾರತಕ್ಕೆ ಇದೊಂದು ಮಹತ್ವದ ರಾಜತಾಂತ್ರಿಕ ಗೆಲುವಾಗಿದೆ. ಭಾರತದ ಒತ್ತಡಕ್ಕೆ ಮಣಿದ ಚೀನಾ ಉಗ್ರ ಸಂಘಟನೆಗಳ ವಿರುದ್ಧದ ನಿರ್ಣಯಕ್ಕೆ ಬೆಂಬಲ ನೀಡುವಂತಾಯಿತು. ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಭಯೋತ್ಪಾದನೆ ವಿರುದ್ಧ ದನಿ ಎತ್ತಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಬ್ರಿಕ್ಸ್ ಸಮಾವೇಶದ ಮೂಲಕ ಪಾಕಿಸ್ತಾನದ ಕುರಿತಾದ ಚೀನಾ ದೇಶದ ದೃಷ್ಟಿಕೋನ ಬಹುಶಃ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.
ಪಾಕ್ ಪ್ರಾಯೋಜಿತ ಭಯೋತ್ಪಾದನೆ ಕುರಿತಂತೆ ಭಾರತ ಮಂಡಿಸಿದ ವಾದವನ್ನು ಚೀನಾ ತಳ್ಳಿಹಾಕಲು ಸಾಧ್ಯವೇ ಇಲ್ಲ ಎಂಬತಂಹ ವಾತಾವರಣ ಬ್ರಿಕ್ಸ್ ಸಮಾವೇಶದಲ್ಲಿ ನಿರ್ಮಾಣವಾಗಿತ್ತು. ವಿಶ್ವದ ಪ್ರಬಲ ರಾಷ್ಟ್ಕ ರಷ್ಯಾ ಸೇರಿದಂತೆ ಎಲ್ಲ ಐದೂ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಯಿಂದ ನರಳುತ್ತಿದ್ದು, ಭಾರತದ ವಾದಕ್ಕೆ ಎಲ್ಲ ರಾಷ್ಟ್ರಗಳೂ ಬೆಂಬಲ ವ್ಯಕ್ತಪಡಿಸಿದವು. ಹೀಗಾಗಿ ಭಾರತದ ವಾದವನ್ನು ಚೀನಾ ಕೂಡ ಒಪ್ಪಿಕೊಳ್ಳಬೇಕಾಯಿತು. ಅಂತೆಯೇ ಈ ಹಿಂದೆ ಭಾರತದೊಂದಿಗಿನ ಡೊಕ್ಲಾಂ ಗಡಿ ವಿವಾದ ಸಂಬಂಧ ವಿಶ್ವ ಸಮುದಾಯ ಚೀನಾದ ಮೇಲೆ ವ್ಯಾಪಕ ಒತ್ತಡ ಹೇರಿತ್ತು, ಬ್ರಿಕ್ಸ್ ಸಮಾವೇಶದಲ್ಲಿ ಯಾವುದೇ ಕಾರಣಕ್ಕೂ ದ್ವಿಪಕ್ಷೀಯ ಮಾತುಕತೆ ನಿಲ್ಲದಂತೆ ನೋಡಿಕೊಳ್ಳುವಂತೆ ಚೀನಾ ಮೇಲೆ ವಿಶ್ವ ಸಮುದಾಯದಿಂದ ಒತ್ತಡ ಹೇರಲಾಗಿತ್ತು.
ಇದೇ ಕಾರಣಕ್ಕೆ ಚೀನಾ ಬ್ರಿಕ್ಸ್ ಸಮಾವೇಶಕ್ಕೂ ಮೊದಲೇ ಗಡಿ ವಿವಾದ ಬಗೆಹರಿಸಿಕೊಳ್ಳಲು ಒಲವು ತೋರಿಸಿತ್ತು. ಆ ಮೂಲಕ ತನ್ನ ನೆಲದಲ್ಲಿ ಆಯೋಜನೆಯಾಗಿದ್ದ ಸಮಾವೇಶಕ್ಕೆ ಯಾವುದೇ ರೀತಿಯ ಚ್ಯುತಿಯಾಗದಂತೆ ಚೀನಾ ಮುನ್ನೆಚ್ಚರಿಕೆ ವಹಿಸಿ ವಿಶ್ವ ಸಮುದಾಯದ ಎದುರು ಆಗಬಹುದಾಗಿದ್ದ ಮುಜುಗರದಿಂದ ತಪ್ಪಿಸಿಕೊಂಡಿದೆ. ಒಂದು ವೇಳೆ ಚೀನಾ ಡೊಕ್ಲಾಂ ಸಮಸ್ಯೆ ಈಡೇರಿಕೆಗೆ ಮುಂದಾಗದೇ ಇದ್ದಿದ್ದರೆ ಭಾರತ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಹಿಂದೆ ಸರಿಯುತ್ತಿತ್ತು ಎಂದು ಸೆಹಗಲ್ ಅಭಿಪ್ರಾಯಪಟ್ಟಿದ್ದಾರೆ.