ಭೂಕಂಪನದ ತೀವ್ರತೆ ಕುಸಿದುಬಿದ್ದ ಕಟ್ಟಡ
ಮೆಕ್ಸಿಕೋ: ಅಮೆರಿಕದ ಮೆಕ್ಸಿಕೋ ನಗರದಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಕೆ 15ಕ್ಕೆ ಏರಿಕೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 8.0ರಷ್ಟು ದಾಖಲಾಗಿದ್ದು, ಮೆಕ್ಸಿಕೋದ ಪಿಜಿಜಪಾನ್ ಪ್ರದೇಶದ 123 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪನದ ತೀವ್ರತೆಗೆ ಕೇಂದ್ರೀಯ ಮೆಕ್ಸಿಕೋ ನಗರದ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ.
ಜುಷಿತಾನ್ ಮತ್ತೆ 10 ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ರಿಕಾರ್ಡೊ ಡೆ ಲಾ ಕ್ರೂಜ್ ಅವರು ತಿಳಿಸಿದ್ದಾರೆ.
ಈ ಪೈಕಿ ಚಿಯಾಪಸ್ ನಲ್ಲಿ ನಾಲ್ಕು ಮಂದಿ, ಟಬಾಸ್ಕೋ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಭೂಕಂಪನದ ತೀವ್ರತೆಗೆ ಜುಷಿತಾನ್ ನಲ್ಲಿ ಹಲವು ಕಟ್ಟಡಗಳು ಬಿರುಕುಗೊಂಡಿದ್ದು, ಹೊಟೆಲ್ ಗಳು, ಬಾರ್ ಮತ್ತು ಟೌನ್ ಹಾಲ್ ಒಂದು ಹಾನಿಗೀಡಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಘಟನಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ಅವಶೇಷಗಳಡಿಯಲ್ಲಿ ಮತ್ತಷ್ಟು ಜನ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಭೂಕಂಪನದಿಂದಾಗಿ ಸಮುದ್ರದಲ್ಲಿ ಮಧ್ಯಮ ಗಾತ್ರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಮೆರಿಕ ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಂತೆಯೇ ಸಮೀಪದ ಗ್ವಾಟೆಮಾಲಾ ನಗರದಲ್ಲೂ ಭೂಕಂಪನವಾದ ಕುರಿತು ವರದಿಯಾಗಿದ್ದು, ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ತೀರ ಪ್ರದೇಶದಲ್ಲಿರುವ ಜನ ಕೂಡಲೇ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರ ಅಭಿಪ್ರಾಯಪಟ್ಟಿರುವಂತೆ 1985ರ ಬಳಿಕ ಮೆಕ್ಸಿಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos