ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿರುವ ಭದ್ರತಾ ಪಡೆಗಳು
ಲಂಡನ್: ಲಂಡನ್ ಮೆಟ್ರೋ ರೈಲು ಮಾರ್ಗ ಗ್ರೀನ್ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದು ಶನಿವಾರ ತಿಳಿದುಬಂದಿದೆ.
ನಿನ್ನೆಯಷ್ಟೇ ನೈರುತ್ಯ ಲಂಡನ್ ನ ಪಾರ್ಸನ್ಸ್ ಗ್ರೀನ್ ಸುರಂಗ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಾಂಬ್ ದಾಳಿಗೆ ಒಳಗಾದ ಮೆಟ್ರೋ ನಿಲ್ದಾಣ ಲಂಡನ್ ನ ಪ್ರತಿಷ್ಠಿತ ಪ್ರದೇಶವೆಂದೇ ಹೇಳಲಾಗುವ ವಿಂಬಲ್ಡನ್ ಪಕ್ಕದಲ್ಲಿಯೇ ಇದೆ.
ಇದೀಗ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿರುವ ಇಸಿಸ್ ಉಗ್ರ ಸಂಘಟನೆ, ಜನರನ್ನು ಹಿಂಸಿಸುವ ಸಲುವಾಗಿಯೇ ದಾಳಿ ಮಾಡಿದ್ದಾಗಿ ಹೇಳಿಕೊಂಡಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಇದಲ್ಲದೆ, ಯೂರೋಪ್ ರಾಷ್ಟ್ರದ ಮೇಲೆ ಕತ್ತಿ ಮಸೆಯುವ ತನ್ನ ದ್ವೇಷವನ್ನು ತಾನು ಮುಂದುವರೆಸುವುದಾಗಿಯೂ ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.
ದಾಳಿ ಕೇವಲ ಸ್ಯಾಂಪ್ ಅಷ್ಟೇ...ಲಂಡನ್ ನಲ್ಲಿ ಎಷ್ಟೇ ಭದ್ರತೆಯನ್ನು ಒದಗಿಸಿದರೂ, ನಾವು ನಗರದಲ್ಲಿ ಸ್ಫೋಟಗಳನ್ನು ನಡೆಸುತ್ತಲೇ ಇರುತ್ತೇವೆ. ಕೇವಲ ಮೆಟ್ರೋ ನಂತರ ಸಾರಿಗೆ ವ್ಯವಸ್ಥೆ ಮೇಲೆ ಮಾತ್ರವೇ ನಮ್ಮ ಗುರಿಯಿಲ್ಲ. ಇಡೀ ಲಂಡನ್ ನಗರದ ನಾಶವನ್ನೇ ಎದುರು ನೋಡುತ್ತಿದ್ದೇವೆಂದು ಉಗ್ರನೊಬ್ಬ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ರೈಲಿನ ಮೇಲಿನ ಉಗ್ರರ ದಾಳಿ ಸಂಬಂಧವಾಗಿ ಈಗಾಗಲೇ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇಂಥಹ ಸಂದರ್ಭದಲ್ಲಿ ಹತಾಶೆಗೊಂಡ ಉಗ್ರರೇ ಈ ದಾಳಿ ಎಸಗಿದ್ದು ಎಂದು ತಮ್ಮ ಮನಸ್ಸಿಗೆ ತೋಚಿದಂತೆ ಊಹಿಸುವುದು ಸರಿಯಲ್ಲ. ಈ ಹೇಡಿ ಕೃತ್ಯವನ್ನು ಎಸಗಿದವರನ್ನು ಭದ್ರತಾಧಿಕಾರಿಗಳು ಪತ್ತೆ ಹಚ್ಚುತ್ತಾರೆಂಬ ಭರವಸೆಯಿದೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಏನನ್ನೂ ಸಾಧಿಸಲಾಗದ ಹತಾಶ ಮನಸ್ಥಿತಿಯ ಉಗ್ರರು ಲಂಡನ್ ನಲ್ಲಿ ರೈಲಿನ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯನ್ನು ತಡೆಯುವಲ್ಲಿ ಅಲ್ಲಿನ ಪೊಲೀಸರು ವಿಫಲರಾಗಿದ್ದಾರೆ. ಉಗ್ರರ ನೇಮಕಕ್ಕೆ ಬಳಕೆಯಾಗುವ ಮುಖ್ಯ ಸಾಧನವಾದ ಇಂಟರ್ ನೆಟ್ ಸೇವೆಯನ್ನು ಅವರಿಗೆ ತಡೆ ಹಿಡಿಯಬೇಕು. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.
2005ರ ಜು.7 ರಂದು ಲಂಡನ್ ನ ಟ್ಯೂಬ್ ರೈಲ್ವೆ ವ್ಯವಸ್ಥೆಯಲ್ಲಿ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಪರಿಣಾಮ 56 ಮಂದಿ ಸಾವನ್ನಪ್ಪಿದ್ದರು.