ಇಸ್ಲಾಮಾಬಾದ್: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಮುಂಬೈ ದಾಳಿಯ ರೂವಾರಿ ಉಗ್ರ ಹಪೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದಾವಾ ಸ್ಪರ್ಧಿಸಲಿದೆ ಎಂದು ಉಗ್ರ ಸಂಘಟನೆಯ ಹಿರಿಯ ಸದಸ್ಯರೊಬ್ಬರು ಸೋಮವಾರ ಹೇಳಿದ್ದಾರೆ.
ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಕಳೆದ ತಿಂಗಳು ಮಿಲ್ಲಿ ಮುಸ್ಲಿಂ ಲೀಗ್ ಎಂಬ ತನ್ನದೇ ಆದ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾನೆ.
ಇತ್ತೀಚಿಗೆ ನಡೆದ ಪಾಕ್ ಉಪ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದ್ದು, ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಪತ್ನಿ ಕುಲ್ಸೂಮ್ ಅವರ ವಿರುದ್ಧ ಜೆಯುಡಿ ಬೆಂಬಲಿತ ಅಭ್ಯರ್ಥಿ ಶೇಕ್ ಯಾಕೂಬ್ ಹೀನಾ ಸೋಲು ಅನುಭವಿಸಿದ್ದ. ಆದರೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ತಮ್ಮ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್ ಎಲ್ಲಾ ಕ್ಷೇತ್ರಗಳಲ್ಲಿ ಬೆಂಬಲಿಸಲಿದೆ ಎಂದು ಹೇಳಿದ್ದಾರೆ.
ಯಾಕೂಬ್ ಉಪ ಚುನಾವಣೆಯಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ನಿಂದ ಸ್ಪರ್ಧಿಸಲು ಬಯಸಿದ್ದ. ಆದರೆ ರಾಜಕೀಯ ಪಕ್ಷವಾಗಿ ಅದು ನೋಂದಣಿಯಾಗದ ಹಿನ್ನೆಲೆಯಲ್ಲಿ ಪಾಕಿಸ್ತಾನ ಚುನಾವಣಾ ಆಯೋಗ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ.
ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಹಪೀಜ್ ಸಯೀದ್ ನನ್ನು ಬಂಧಿಸಬೇಕು ಎಂದು ಅಮೆರಿಕ ಸರ್ಕಾರ ತುಂಬಾ ದಿನಗಳಿಂದ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ಆದರೆ ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹಫೀಜ್ ಸಯೀದ್ ಈಗ ಹೊಸ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದ್ದಾನೆ ಎಂದು ಹೇಳಲಾಗಿದೆ.