ನ್ಯೂಯಾರ್ಕ್ ನಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದ ಇವಾಂಕಾ ಟ್ರಂಪ್
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸರ್ಕಾರದ ಸಲಹೆಗಾರ್ತಿ ಇವಾಂಕಾ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ಹೊರಗೆ ಇಂದು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು.
ಪಿಟಿಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮಹಿಳಾ ಉದ್ಯಮಶೀಲತೆ ಮತ್ತು ಎರಡೂ ದೇಶಗಳಲ್ಲಿನ ಕಾರ್ಯಪಡೆಯ ಅಭಿವೃದ್ಧಿ ಕುರಿತು ಉಭಯ ನಾಯಕಿಯರು ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.
ತಮ್ಮ ಭೇಟಿಯ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಇವಾಂಕಾ ಟ್ರಂಪ್, ಸುಷ್ಮಾ ಸ್ವರಾಜ್ ತುಂಬಾ ಗೌರವಯುತ ಮಹಿಳೆಯಾಗಿದ್ದು ವರ್ಚಸ್ವಿ ವಿದೇಶಾಂಗ ಸಚಿವೆ ಕೂಡ ಹೌದು. ನಿಪುಣೆ ಮತ್ತು ವರ್ಚಸ್ವಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ಬಹಳ ಗೌರವವಿದೆ. ಮಹಿಳಾ ಉದ್ಯಮಶೀಲತೆ, ಮುಂದಿನ ಜಿಇಎಸ್ 2017 ಮತ್ತು ಅಮೆರಿಕಾ ಮತ್ತು ಭಾರತದಲ್ಲಿ ಕಾರ್ಯಪಡೆಯ ಅಭಿವೃದ್ಧಿ ಕುರಿತು ನಾವು ಚರ್ಚೆ ನಡೆಸಿದೆವು ಎಂದಿದ್ದಾರೆ.
ಭಾರತ ಮತ್ತು ಅಮೆರಿಕಾ ಜಂಟಿಯಾಗಿ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯನ್ನು ನವೆಂಬರ್ 28ರಿಂದ 30ರವರೆಗೆ ಹೈದರಾಬಾದಿನಲ್ಲಿ ಆಯೋಜಿಸುತ್ತಿದ್ದು ಅಮೆರಿಕಾ ನಿಯೋಗದ ಪ್ರತಿನಿಧಿಯಾಗಿ ಇವಾಂಕಾ ಟ್ರಂಪ್ ಭಾಗವಹಿಸುತ್ತಿದ್ದಾರೆ.
ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಇದೇ 23ರಂದು ಭಾಷಣ ಮಾಡುವ ನಿರೀಕ್ಷೆಯಿದೆ.