ನ್ಯೂಯಾರ್ಕ್: ವಿಶ್ವಸಂಸ್ಥೆಯ 72ನೇ ಮಹಾಧಿವೇಶನದಲ್ಲಿ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ವಾದ ಹಾಗೂ ಪ್ರತಿವಾದ ಮುಂದುವರೆದಿದ್ದು, ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನದ ವಿರುದ್ಧ ಸುಷ್ಮಾ ಸ್ವರಾಜ್ ಅವರು ಗುಡುಗಿರುವ ಬೆನ್ನಲ್ಲೇ ಪಾಕಿಸ್ತಾನ ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಪ್ರತ್ಯಾರೋಪ ಮಾಡಿದೆ.
ವಿಶ್ವಸಂಸ್ಥೆಯ ಪಾಕಿಸ್ತಾನದ ಖಾಯಂ ಪ್ರತಿನಿಧಿಯಾಗಿರುವ ಡಾ.ಮಾಹಿಲಾ ಲೋಧಿ, ಮೋದಿ ಭಾರತದ ವಿರುದ್ಧ ಆರೋಪ ಮಾಡಿದ್ದು, ಕಾಶ್ಮೀರದಲ್ಲಿ ಭಾರತ ಯುದ್ಧ ಅಪರಾಧಗಳಲ್ಲಿ ತೊಡಗಿಕೊಂಡಿದ್ದು, ಈ ಕುರಿತಂತೆ ಅಂತರಾಷ್ಟ್ರೀಯ ತನಿಖೆ ನಡೆಸಬೇಕಿದೆ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಭಾರತ ತಿರಸ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಗಾಯಗೊಂಡಿರುವ ಮಹಿಳೆಯೊಬ್ಬರ ಭಾವಚಿತ್ರವನ್ನು ಪ್ರದರ್ಶಿಸಿುವ ಲೋಧಿ, ಈ ಮಹಿಳೆ ಪೆಲೆಟ್ ಗನ್ ದಾಳಿಯಿಂದಾಗಿ ಗಾಯಗೊಂಡಿದ್ದಾಳೆ. ಭಾವಚಿತ್ರದಿಂದಲೇ ಭಾರತದ ಮತ್ತೊಂದು ಮುಖವನ್ನು ನೋಡಬಹುದು ಎಂದಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಭಾರತ ಭಯೋತ್ಪಾದನೆಯ ತಾಯ್ನಾಡಾಗಿದೆ. ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಭಾರತ ಕರೆಸಿಕೊಳ್ಳುತ್ತಿದೆ. ಆದರೆ, ವಾಸ್ತವವಾಗಿಅದು ಬರೀ ಬೂಟಾಟಿಕೆಯಷ್ಟೇ ಎಂದು ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸಿದೆ.
ಇದಲ್ಲದೆ, ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿರುವ ಪಾಕಿಸ್ತಾನ, ಭಾರತದ ನಾಯಕನನ್ನು ಆರ್'ಎಸ್ಎಸ್ ಮೂಲಗಳಿಂದ ಆಯ್ಕೆ ಮಾಡಲಾಗಿದೆ. ಆರ್'ಎಸ್ಎಸ್ ವಿರುದ್ಧ ಮಹಾತ್ಮ ಗಾಂಧೀಜಿಯವರ ಹತ್ಯೆಯ ಆರೋಪವಿದೆ. ಭಾರತದಲ್ಲಿ ಜನಾಂಗೀಯ ಹಾಗೂ ಬಲಪಂಥೀಯ ಸಿದ್ಧಾಂತಗಳನ್ನು ಅವಳವಡಿಸಿಕೊಂಡಿರುವ ಪಕ್ಷವೊಂದು ಆಡಳಿತ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ.
ಇದರೊಂದಿಗೆ ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ವಿರುದ್ಧವೂ ಕಿಡಿಕಾರಿರುವ ಪಾಕಿಸ್ತಾನ, ಮತಾಂಧ ನಾಯಕನೊಬ್ಬನನ್ನು ಭಾರತದ ಅತೀದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.
ಭಾರತದೊಂದಿಗೆ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ. ಆದರೆ, ಮಾತುಕತೆಯಲ್ಲಿ ಕಾಶ್ಮೀರ ವಿಚಾರ ಇರಲೇಬೇಕು. ಹಾಗೂ ಕಾಶ್ಮೀರದಲ್ಲಿ ನಡೆಸಲಾಗುತ್ತಿರುವ ವಿಧ್ವಂಸಕತೆ ಮತ್ತು ಪ್ರಾಯೋಜಿತ ಭಯೋತ್ಪಾದನೆಯ ಆಂದೋಲನವನ್ನು ಭಾರತ ನಿಲ್ಲಿಸಬೇಕೆಂದು ಲೋಧಿ ತಿಳಿಸಿದ್ದಾರೆ.