ವಿದೇಶ

‘ನಾವು ಉಗ್ರರನ್ನು ರಕ್ಷಿಸುತ್ತಿದ್ದೇವೆ: ಪಾಕ್ ಗುಪ್ತಚರ ಅಧಿಕಾರಿ

Lingaraj Badiger
ಇಸ್ಲಾಮಾಬಾದ್: ನಮ್ಮ ದೇಶದ ಗುಪ್ತಚರ ಸಂಸ್ಥೆಯೇ ಭಯೋತ್ಪಾದಕರನ್ನು ರಕ್ಷಿಸುತ್ತಿದೆ ಎಂದು ಸ್ವತಃ ಪಾಕಿಸ್ತಾನದ ಗುಪ್ತಚರ ದಳದ ಅಧಿಕಾರಿಯೊಬ್ಬರು ಆರೋಪಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮನವಿ ಮಾಡಿರುವುದಾಗಿ ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ.
ಪಾಕ್ ಗುಪ್ತಚರ ದಳದಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಮಲಿಕ್ ಮುಖ್ತಾರ್ ಅಹ್ಮದ್ ಶಹ್‌ಜಾದ್ ಅವರು ಈ ಗಂಭೀರ ಆರೋಪ ಮಾಡಿದ್ದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅನುಮಾನ ಇರುವವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸುವಂತೆ ಐಎಸ್‌ಐಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ವಿವಿಧ ರಾಷ್ಟ್ರಗಳ ಭಯೋತ್ಪಾದಕರ ಬಗ್ಗೆ ತಾವು ಸಾಕ್ಷ್ಯಾಧಾರಗಳ ಸಮೇತ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅರ್ಜಿಯಲ್ಲಿ ದೂರಿರುವುದಾಗಿ ಡಾನ್ ವರದಿ ಮಾಡಿದೆ.
ಗುಪ್ತಚರ ಮಾಹಿತಿ ಕಲೆ ಹಾಕುವ ಹೆಸರಿನಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೇ ಭಯೋತ್ಪಾದಕ ಸಂಘಟನೆಗಳ ಜತೆ ನೇರ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ಗುಪ್ತಚರ ದಳದ ಪ್ರಧಾನ ನಿರ್ದೇಶಕರಿಗೆ ವರದಿ ನೀಡಲಾಗಿದ್ದೂ ಅವರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಮಲಿಕ್ ಆರೋಪಿಸಿದ್ದಾರೆ.
ಗುಪ್ತಚರ ದಳದ ಪಂಜಾಬ್ ವಿಭಾಗದ ಜಂಟಿ ನಿರ್ದೇಶಕರ ಮಗನಿಗೂ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂದು ಮಲಿಕ್ ಆರೋಪಿಸಿದ್ದಾರೆ.
SCROLL FOR NEXT