ವಿದೇಶ

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ: ಚೀನಾ ಮಾಧ್ಯಮ!

Srinivasamurthy VN
ಬೀಜಿಂಗ್: ಇತ್ತೀಚೆಗಷ್ಟೇ ಕಾಶ್ಮೀರ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದ್ದ ಚೀನಾ ಇದೀಗ ಮತ್ತೆ ಪಾಕಿಸ್ತಾನಕ್ಕೆ ಕೈ ಕೊಟ್ಟಿದ್ದು, ಆ ದೇಶದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಹೇಳಿದೆ.
ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ವಿಶ್ವಸಂಸ್ಥೆಯ ಬೆಳವಣಿಗೆಗಳ ಕುರಿತು ಸಂಪಾದಕೀಯ ಪ್ರಕಟಸಿದ್ದು, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ ಎಂದು ಹೇಳಿದೆ. ಅಂತೆಯೇ ವಿಶ್ವಸಂಸ್ಥೆಯಲ್ಲಿ ಭಾರತದ  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣವನ್ನು ಸೊಕ್ಕಿನ ನಡೆ ಎಂದು ಗ್ಲೋಬಲ್ ಟೈಮ್ಸ್ ಟೀಕಿಸಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದು ನಿಜ.. ಆದರೆ ಪಾಕಿಸ್ತಾನ ತನ್ನ ನೀತಿಯಲ್ಲಿ ಉಗ್ರತ್ವ ಸೇರಿಸಿಕೊಳ್ಳುವ  ಮೂಲಕ ಮತ್ತು ಅದಕ್ಕೆ ಪ್ರಚೋದನೆ ನೀಡುವ ಮೂಲಕ ಗಳಿಸುವುದಾದರೂ ಏನು..? ಹಣ, ಅಧಿಕಾರ ಮತ್ತು  ಗೌರವನ್ನು ಸಂಪಾದಿಸುತ್ತದೆಯೇ? ಇದನ್ನು ಭಾರತ ಅರಿಯಬೇಕು.. ಯಾವುದೇ ದೇಶದ ಅಭಿವೃದ್ದಿಯಲ್ಲಿ ಭಯೋತ್ಪಾದನೆ ಅಡ್ಡಗಾಲು ಹಾಕುತ್ತದೆಯೇ ಹೊರತು ಉತ್ತೇಜನ ನೀಡುವುದಿಲ್ಲ. ಪಾಕಿಸ್ತಾನ ತನ್ನ ಆರ್ಥಿಕತೆಯ  ಅಭಿವೃದ್ಧಿಗಾಗಿ ಮತ್ತು ತನ್ನ ವಿದೇಶಿ ಸಂಬಂಧಗಳನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಪ್ರಯತ್ನಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದೆ.

ಈ ಹಿಂದೆ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಮಾತನಾಡಿದ್ದ ಸ್ವರಾಜ್ ಅವರು, ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದ ನಂತರವೂ ಭಾರತ ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡು ಎಂಜಿನಿಯರ್ ಗಳು,  ವೈದ್ಯರನ್ನು ಉತ್ಪಾದಿಸುತ್ತಿದ್ದರೆ ಪಾಕಿಸ್ತಾನ ಏಕೆ ಜಿಹಾದಿಗಳನ್ನು ಹುಟ್ಟುಹಾಕಿ ಬೆಳೆಸುತ್ತಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಗಾಡಾಪಟ್ಟಿಯಲ್ಲಿ ಗಾಯಗೊಂಡಿದ್ದ ಯುವತಿ ಫೋಟೋ ತೋರಿಸಿ  ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿ ಎಂದು ಹೇಳಿತ್ತು. ಆದರೆ ಇದೀಗ ಆ ಫೋಟೋ ನಕಲಿ ಎಂದು ಸಾಬೀತಾಗಿ ಪಾಕಿಸ್ತಾನ ವಿಶ್ವಸಮುದಾಯದ ಎದುರು ಮುಜುಗರಕ್ಕೀಡಾಗುವಂತೆ ಮಾಡಿದೆ.

ಇದೀಗ ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಚೀನಾ ಕೂಡ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇದೆ ಹೇಳುವ ಮೂಲಕ ವಿಶ್ವಸಮುದಾಯದ ಎದುರು ಪಾಕಿಸ್ತಾನವನ್ನು ಮತ್ತೊಮ್ಮೆ ಮುಜುಗುರಕ್ಕೀಡಾಗುವಂತೆ ಮಾಡಿದೆ.
SCROLL FOR NEXT