ತ್ರಿಶ್ನ ಶಕ್ಯಾ(ಎಎಫ್ ಪಿ ಫೋಟೋ)
ಕಾಠ್ಮಂಡು: ನೇಪಾಳ ರಾಜಧಾನಿ ಕಾಠ್ಮಂಡುವಿನ ಹೊಸ ಕುಮಾರಿ ಎಂದು ಮೂರು ವರ್ಷದ ಹೆಣ್ಣು ಮಗುವನ್ನು ಘೋಷಿಸಲಾಗಿದೆ. ಹೆಣ್ಣು ಮಕ್ಕಳನ್ನು ಇಲ್ಲಿ ಜೀವಂತ ದೇವತೆ ಎಂದು ಪೂಜಿಸಲಾಗುತ್ತಿದ್ದು ಆಕೆ ಹಿಂದಿನ ಜೀವಂತ ದೇವತೆ ಮತಿನೆ ಶಕ್ಯ ಪ್ರೌಢಾವಸ್ಥೆಗೆ ತಲುಪಿದ ನಂತರ ತ್ರಿಶ್ನಾ ಅರಮನೆ ಸೇರಲಿದ್ದಾಳೆ.
ಇಂದು ನಡೆದ ಸಮಾರಂಭದಲ್ಲಿ ತ್ರಿಶ್ನಾ ಶಕ್ಯಳನ್ನು ನೂತನ ಕುಮಾರಿ ಎಂದು ಪಟ್ಟಾಭಿಷೇಕ ಮಾಡಲಾಯಿತು. ಆಕೆ ತನ್ನ ಕುಟುಂಬ ತೊರೆದು ಕಠ್ಮಂಡುವಿನ ಪುರಾತನ ದರ್ಬಾರ ಸ್ಕ್ವೇರ್ ಸೇರಲಿದ್ದಾಳೆ.ಅಲ್ಲಿ ಆಕೆಯನ್ನು ನೋಡಿಕೊಳ್ಳಲು ವಿಶೇಷ ಪರಿಚಾರಕರು ಇರುತ್ತಾರೆ.
ನಾಲ್ವರು ಹೆಣ್ಣು ಮಕ್ಕಳಲ್ಲಿ ತ್ರಿಶ್ನಾಳನ್ನು ಆಯ್ಕೆ ಮಾಡಲಾಯಿತು ಎಂದು ಹಿಂದೂ ಧರ್ಮದ ಅರ್ಚಕ ಉದ್ದವ್ ಮನ್ ಕರ್ಮಚಾರ್ಯ ಎಎಫ್ ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಗುವನ್ನು ಒಂದು ಬಾರಿ ಜೀವಂತ ದೇವತೆ ಎಂದು ಅಭಿಷೇಕ ಮಾಡಿದ ನಂತರ ಕಠ್ಮಂಡು ಕಣಿವೆಗೆ ಸೇರಿದ ನೆವರ್ ಸಮುದಾಯಕ್ಕೆ ಸೇರುತ್ತಾಳೆ. ವಿಶೇಷ ಸಂದರ್ಭಗಳಲ್ಲಿ ವರ್ಷದಲ್ಲಿ 13 ಬಾರಿ ಅವಳು ತನ್ನ ಹೊಸ ಮನೆಯನ್ನು ಬಿಟ್ಟು ಹೊರ ಹೋಗಬಹುದು. ಕಠ್ಮಂಡುವಿನ ಸುತ್ತ ಸಾಂಪ್ರದಾಯಿಕ ದಿರಿಸಿನೊಂದಿಗೆ ಆಕೆಯನ್ನು ಮೆರವಣಿಗೆಯಲ್ಲಿ ಕರೆದೊಯ್ದು ದೇವಿಯಂತೆ ಆರಾಧನೆ ಮಾಡಲು ಅಲಂಕಾರ ಮಾಡಲಾಗುತ್ತದೆ ಎಂದು ಅರ್ಚಕರು ವಿವರಿಸುತ್ತಾರೆ.
ಕುಮಾರಿಯನ್ನು ಹಿಂದೂ ದೇವತೆ ತಲೆಜುವಿನ ಸಾಕಾರ ಎಂದು ಪರಿಗಣಿಸಲಾಗುತ್ತಿದ್ದು, ಆಕೆಯ ಪಾದಗಳನ್ನು ನೆಲಕ್ಕೆ ತಾಗಿಸಲು ಬಿಡುವುದಿಲ್ಲ. ಕುಮಾರಿಯಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುತ್ತದೆ. ಕಳಂಕವಿಲ್ಲದ ದೇಹ, ಸಿಂಹದಂತೆ ಎದೆ ಮತ್ತು ಜಿಂಕೆಯಂತಹ ತೊಡೆಗಳನ್ನು ಹೊಂದಿರಬೇಕಾಗುತ್ತದೆ. ಹುಡುಗಿ ಈ ಎಲ್ಲಾ ಗುಣಗಳನ್ನು ಹೊಂದಿದ್ದರೂ ಕೂಡ ಎತ್ತನ್ನು ಬಲಿ ಕೊಡುವಾಗ ಹುಡುಗಿ ಅಳದೆ ತನ್ನ ಧೈರ್ಯ, ಸಾಹಸಗಳನ್ನು ತೋರಿಸಬೇಕಾಗುತ್ತದೆ.
ನೆವರ್ ಸಮುದಾಯದಲ್ಲಿ ಹಿಂದೂ ಮತ್ತು ಬೌದ್ಧ ಧರ್ಮ ಸಮ್ಮಿಳಿತಗೊಂಡಿರುತ್ತದೆ. ನೇಪಾಳದಲ್ಲಿ ಹಿಂದೂ ರಾಜರ ವಂಶ 2008ಕ್ಕೆ ಕೊನೆಯಾದರೂ ಕೂಡ ಕುಮಾರಿಗಳ ಆಯ್ಕೆ ಸಂಪ್ರದಾಯ ಮಾತ್ರ ಮುಂದುವರಿದಿದೆ.
ಜೀವಂತ ದೇವತೆ ಎಂದು ಪರಿಗಣಿಸಲ್ಪಡುವ ಬಾಲಕಿಯರಿಗೆ ಶಿಕ್ಷಣ ನೀಡಬೇಕೆಂದು 2008ರಲ್ಲಿ ನೇಪಾಳ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿ ಅರಮನೆಯೊಳಗೆ ಓದಲು ವ್ಯವಸ್ಥೆ ಮಾಡಿ ಅಲ್ಲಿಯೇ ಪರೀಕ್ಷೆ ಬರೆಯಲು ಹೇಳಲಾಗುತ್ತದೆ.