ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್
ನ್ಯೂಯಾರ್ಕ್: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರನ್ನು 2014ರಲ್ಲಿ ಪೇಶಾವರದ ಶಾಲೆಯ ಮೇಲೆ ದಾಳಿ ನಡೆಸಿದ್ಜ ಭಯೋತ್ಪಾದಕನೊಂದಿಗೆ ವಿನಿಮಯಕ್ಕೆ ಪ್ರಸ್ತಾವನೆ ಇಡಲಾಗಿತ್ತು ಎಂದು ಪಾಕಿಸ್ತಾನ ಬುಧವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮೊಹಮ್ಮದ್ ಆಸೀಫ್ ಅವರು, ಪೇಶಾವರ ಶಾಲೆ ಮೇಲೆ ದಾಳಿ ನಡೆಸಿದ್ದ ಉಗ್ರ ಆಫ್ಘಾನಿಸ್ತಾನದ ಜೈಲಿನಲ್ಲಿ ಇರಿಸಲಾಗಿದೆ. ಭದ್ರತಾ ಸಲಹೆಗಾರರೊಬ್ಬರು ಪೇಶಾವರ ಶಾಲೆ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕನೊಂದಿಗೆ ವಿನಿಮಯಕ್ಕೆ ಪ್ರಸ್ತಾವನೆ ಇಟ್ಟಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಕುಲಭೂಷಣ್ ಜಾಧವ್ ಬಿಡುಗಡೆಗೆ ಭಾರತ ಯತ್ನ ನಡೆಸಿತ್ತೇ ಎಂಬ ಅನುಮಾನಗಳು ವ್ಯಕ್ತವಾಗಿದೆ.
ಆದರೆ, ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾವ ದೇಶದವರು ಮತ್ತು ಆಫ್ಘಾನಿಸ್ತಾನದ ಭಯೋತ್ಪಾದಕನ ಹೆಸರನ್ನು ಖಾವಾಜಾ ಬಹಿರಂಗಪಡಿಸಿಲ್ಲ. ಭಯೋತ್ಪಾದನನ್ನು ಇನ್ನೊಬ್ಬ ಭಯೋತ್ಪಾದಕ (ಕುಲಭೂಷಣ್ ಜಾಧವ್) ಜೊತೆ ಪಾಕಿಸ್ತಾನ ವಿನಿಮಯ ಮಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ನನಗೆ ತಿಳಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ಕುರಿತಾದ ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್'ಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮರಣ ದಂಡನೆ ವಿಧಿಸಿತ್ತು. ಅವರ ವಿರುದ್ಧದ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳು ನ್ಯಾಯಾಲಯದ ರಹಸ್ಯ ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.