ವಿದೇಶ

ಟ್ರಂಪ್ ವಕೀಲರ ಕಚೇರಿ ಮೇಲೆ ಎಫ್ ಬಿಐ ದಾಳಿ, ನೀಲಿ ಚಿತ್ರಗಳ ನಟಿಗೆ ಸಂಬಂಧಿಸಿದ ದಾಖಲೆ ಜಪ್ತಿ

Lingaraj Badiger
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾಸಗಿ ವಕೀಲ ಮೈಕೆಲ್ ಕೋಹೆನ್ ಅವರ ಕಚೇರಿ ಮೇಲೆ ಎಫ್ ಬಿಐ ಮಂಗಳವಾರ ದಾಳಿ ನಡೆಸಿದ್ದು, ನೀಲಿ ಚಿತ್ರಗಳ ನಟಿಗೆ 1.30 ಲಕ್ಷ ಡಾಲರ್ (83 ಲಕ್ಷ ರುಪಾಯಿ) ನೀಡಿದ್ದ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಎಫ್ ಬಿಐ ಇಂದು ನ್ಯೂಯಾರ್ಕ್ ನಲ್ಲಿರುವ ಕೋಹೆನ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದು, ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಇಮೇಲ್ ಮತ್ತು ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್ ಗೆ ಹಣ ಪಾವತಿಸಿದ್ದ ಬ್ಯಾಂಕ್ ದಾಖಲೆಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಎಫ್ ಬಿಐ ದಾಳಿ ಖಾರವಾಗಿಯೇ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ದಾಳಿ 'ನಾಚಿಕೆಗೇಡು' ಮತ್ತು 'ಇದು ನಮ್ಮ ದೇಶದ ಮೇಲಿನ ಆಕ್ರಮಣ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕೀಲ ಮೈಕೆಲ್ ಕೋಹೆನ್ ಹಲವು ವರ್ಷಗಳಿಂದ ಟ್ರಂಪ್ ಅವರ ಆಪ್ತ ಹಾಗೂ ಅತ್ಯಂತ ವಿಶ್ವಾರ್ಹ ವ್ಯಕ್ತಿಯಾಗಿದ್ದು, 2006ರಲ್ಲಿ ಉದ್ಯಮಿಯಾಗಿದ್ದ ಟ್ರಂಪ್, ತಾನು ನೀಲಿ ಚಿತ್ರ ನಟಿಯೊಂದಿಗೆ ನಡೆಸಿದ್ದ ರಂಗಿನಾಟ ಬಯಲು ಮಾಡದಂತೆ ನಟಿಗೆ 1.30 ಲಕ್ಷ ಡಾಲರ್ (83 ಲಕ್ಷ ರುಪಾಯಿ) ಮೊತ್ತವನ್ನು ತಮ್ಮ ಖಾಸಗಿ ವಕೀಲರ ಮೂಲಕ ಕಳುಹಿಸಿಕೊಟ್ಟಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ತನ್ನ ಹಾಗೂ ನಟಿ ನಡುವಿನ ಸಂಬಂಧ ಸಾರ್ವಜನಿಕವಾಗಿ ಬಯಲಾಗದೇ ಇರಲು ಟ್ರಂಪ್ ತನ್ನ ವಕೀಲನ ಮೂಲಕ ಭಾರೀ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
SCROLL FOR NEXT