ಮಾಸ್ಕೋ: ರಷ್ಯಾ ಜನತೆ 3ನೇ ಮಹಾಯುದ್ಧಕ್ಕೆ ಸನ್ನದ್ಧರಾಗ ಬೇಕಿದ್ದು, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿಕೊಳ್ಳಿ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಬಿತ್ತರಿಸಿದೆ.
ರಸಾಯನಿಕ ಅಸ್ತ್ರಗಳ ಬಳಕೆ ಮಾಡಿ ಅಮಾಯಕರ ಮಾರಣಹೋಮ ನಡೆಸಿದ್ದಾರೆ ಎಂದು ಆರೋಪಿಸಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಜಂಟಿ ಕಾರ್ಯಾಚರಣೆ ನಡೆಸಿ ಸಿರಿಯಾದ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ರಷ್ಯಾ ಮತ್ತು ಚೀನಾ ಅಮೆರಿಕ ವಿರುದ್ಧ ಕಿಡಿಕಾರಿವೆ. ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಕಿಡಿಕಾರಿದ್ದು, ಅಮೆರಿಕದ ದುಸ್ಸಾಹಸಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದರ ಬೆನ್ನಲ್ಲೇ ರಷ್ಯಾ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಯೊಂದು ತನ್ನ ದೇಶದ ಪ್ರಜೆಗಳಿಗೆ '3ನೇ ಮಹಾಯುದ್ಧಕ್ಕೆ ಸನ್ನದ್ಧರಾಗಿರುವಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಿದೆ. ರೊಸ್ಸಿಯಾ-24 ಎಂಬ ಚಾನಲ್ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದು, ಈಗ್ಗೆ ಒಂದು ವರ್ಷದ ಹಿಂದೆ ತಮ್ಮ ವಾಹಿನಿ ಹೊಸ ಶೀಥಲ ಸಮರದ ಕುರಿತು ವರದಿ ಪ್ರಸಾರ ಮಾಡಿತ್ತು. ಆಗ ಆ ಸುದ್ದಿಯನ್ನು ಯಾರೂ ನಂಬಲಿಲ್ಲ. ಆದರೆ ಈಗ ನಂಬಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಆರಂಭವಷ್ಟೇ. ಈಗಾಗಲೇ ನಾವು ಕ್ಯೂಬಾ ಕ್ಷಿಪಣಿ ಸಮಸ್ಯೆ 2.0ವನ್ನು ನೋಡುತ್ತಿದ್ದೇವೆ.
ದೇಶದಲ್ಲಿರುವ ಬಾಂಬ್ ಶೆಲ್ಟರ್ (ಬಾಂಬ್ ನಿರೋಧಕ ಅಡಗುತಾಣಗಳು) ಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮತ್ತು ನಾಗರಿಕ ಸವಲತ್ತುಗಳ ಕಲ್ಪಿಸಬೇಕಿದೆ. ಕಡಿಮೆ ಸಿಹಿ ಮತ್ತು ಹೆಚ್ಚು ನೀರಿನ ದಾಸ್ತಾನು ಶೇಖರಿಸಿಕೊಳ್ಳಬೇಕಿದೆ. ವೀಕ್ಷಕರೇ ಕೂಡಲೇ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ದಿನಸಿ ಸಾಮಗ್ರಿಗಳನ್ನು, ವೈದ್ಯಕೀಯ ಸಾಮಗ್ರಿಗಳನ್ನು, ಔಷಧಿಗಳನ್ನು ಪ್ಯಾಕ್ ಮಾಡಿಟ್ಟುಕೊಳ್ಳಿ. 8 ವರ್ಷಗಳಿಗಾಗುವಷ್ಚು ಅಕ್ಕಿ, 3 ರಿಂದ 7 ವರ್ಷಗಳಿಗಾಗುವಷ್ಟು ಓಟ್ ಮೀಲ್ಸ್ ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ, ತಜ್ಞರು ಅಭಿಪ್ರಾಯಪಟ್ಟಿರುವಂತೆ ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿಟ್ಟುಕೊಳ್ಳುವುದು ಒಳಿತು ಎಂದು ವರದಿಯಲ್ಲಿ ಹೇಳಿದೆ.
ಅಂತೆಯೇ ಡೊನಾಲ್ಡ್ ಟ್ರಂಪ್ ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಬಳಿಕ ಬಹುಶಃ ಅಮೆರಿಕನ್ನರಿಗೆ ತಮ್ಮ ಆಯ್ಕೆಯ ಕುರಿತು ಪಶ್ಛಾತಾಪ ಇರಬಹುದು ಎಂದೂ ವಾಹಿನಿ ಟ್ರಂಪ್ ವಿರುದ್ಧ ವ್ಯಂಗ್ಯವಾಡಿದೆ.