ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್. ಖಮರ್ ಜಾವೇದ್ ಬಾಜ್ವಾ
ಇಸ್ಲಾಮಾಬಾದ್: ಕಾಶ್ಮೀರ ವಿಚಾರ ಸೇರಿದಂತೆ ಭಾರತ-ಪಾಕಿಸ್ತಾನ ವಿವಾದವನ್ನು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಬಹುದು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್. ಖಮರ್ ಜಾವೇದ್ ಬಾಜ್ವಾ ಅವರು ಭಾನುವಾರ ಹೇಳಿದ್ದಾರೆ.
ಕಾಕುಲ್ ನಲ್ಲಿ ನಡೆದ ಪಾಕಿಸ್ತಾನ ಸೇನಾ ಅಕಾಡೆಮಿಯ ತೇರ್ಗಡೆ ಪರೇಡ್ ನಲ್ಲಿ ಮಾತನಾಡಿರುವ ಅವರು ಈ ವಿಚಾರವನ್ನು ಹೇಳಿದ್ದಾರೆ.
ಕಾಶ್ಮೀರ ವಿಚಾರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನ ಹಲವು ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ. ಇದರಿಂದ ಎರಡೂ ರಾಷ್ಟ್ರಗಳಲ್ಲೂ ಶಾಂತಿಯುತ ವಾತಾವರಣ ನಿರ್ಮಾಣಗೊಳ್ಳಲಿದೆ. ಸಾರ್ವಭೌಮ, ಸಮಾನತೆ, ಘನತೆ ಹಾಗೂ ಗೌರವದ ಆಧಾರದ ಮೇಲೆ ಇಂತಹ ಮಾತುಕತೆಗೆ ಪಾಕಿಸ್ತಾನ ಬದ್ಧವಾಗಿದೆ.
ಪಾಕಿಸ್ತಾನ ಶಾಂತಿ ಪ್ರೀತಿಸುವ ರಾಷ್ಟ್ರವಾಗಿದೆ. ಎಲ್ಲಾ ರಾಷ್ಟ್ರಗಳಲ್ಲೂ ಪ್ರಮುಖವಾಗಿ ನೆರೆಹೊರೆ ರಾಷ್ಟ್ರಗಳೊಂದಿಗೆ ಸಾಮರಸ್ಯ ಮತ್ತು ಶಾಂತಿಯುತ, ಸಹಬಾಳ್ವೆಯನ್ನು ಬಯಸುತ್ತದೆ. ನಮ್ಮ ಶಾಂತಿ ಬಯಕೆಯನ್ನು ನಮ್ಮ ದೌರ್ಬಲ್ಯದ ಸಂಕೇವೆಂದು ಪರಿಗಣಿಸಬಾರದು. ಎಂತಹುದ್ದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ನಮ್ಮ ಸೇನೆ ಸರ್ವಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರ ಜನತೆಗೆ ಸ್ವ-ನಿರ್ಣಯ ಮೂಲಭೂತ ಹಕ್ಕು ಪಡೆಯಲು ರಾಜಕೀಯ ಹಾಗೂ ನೈತಿಕ ಬೆಂಬಲ ನೀಡುವ ಅಗತ್ಯವಿದೆ ಎಂದಿದ್ದಾರೆ.
ಭಯೋತ್ಪಾದನೆ ಹಾಗೂ ಉಗ್ರಗಾಮಿಗಳನ್ನು ತೊಡೆದುಹಾಕಲು ಪಾಕಿಸ್ತಾನ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ನಮ್ಮ ಈ ಕಾರ್ಯಗಳು ಹಾಗೂ ಪ್ರಯತ್ನಗಳು ಹೀಗೆಯೇ ಮುಂದುವರೆಯಲಿದೆ. ಪಾಕಿಸ್ತಾನವನ್ನು ದುರ್ಬಲಗೊಳಿಸಲು ಹೈಬ್ರಿಡ್ ಯುದ್ಧವನ್ನು ಘೋಷಣೆ ಮಾಡಲಾಗಿದೆ. ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ನಮ್ಮ ಶತ್ರುಗಳಿಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos