ನರೇಂದ್ರ ಮೋದಿ-ಕ್ಸೀ ಜಿನ್ ಪಿಂಗ್
ವುಹಾನ್: ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಚೀನಾದ ವುಹಾನ್ ನಲ್ಲಿ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಡೊಕ್ಲಾಮ್ ವಿವಾದ ಬಗೆಹರಿದ ನಂತರ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು, " ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವುದಕ್ಕೆ ಸಂತಸವಾಗಿದೆ. "ವಸ೦ತ ಋತು ಭೇಟಿ ಮಾಡುವುದಕ್ಕೆ ಉತ್ತಮ ಸಮಯ ಎಂದು ಕ್ಸೀ ಹೇಳಿದ್ದಾರೆ.
ಕ್ಸಿ ಜಿನ್ ಪಿಂಗ್ ಅವರ ಸ್ವಾಗತಕ್ಕೆ ಧನ್ಯವಾದ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಚೀನಾದ ಮೂಲಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದರದ ಸ್ವಾಗತದಿಂದ ಸಂತಸಗೊಂಡಿದ್ದೇನೆ. ಚೀನಾದ ಮೂಲಸೌಕರ್ಯ ಹಾಗೂ ವಿದ್ಯುತ್ ಯೋಜನೆಗಳು ವಿಶಿಷ್ಟವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವುಹಾನ್ ಗೆ ಭೇಟಿ ನೀಡಿದ್ದನ್ನೂ ಮೋದಿ ಸ್ಮರಿಸಿದ್ದಾರೆ. " ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವುಹಾನ್ ಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ನಾನು ತ್ರೀ ಜಾರ್ಜಸ್ ಅಣೆಕಟ್ಟಿನ ಬಗ್ಗೆ ಕೇಳಿದ್ದೆ. ಅಣೆಕಟ್ಟನ್ನು ನಿರ್ಮಾಣ ಮಾಡಿದ ವೇಗ ನನಗೆ ಸ್ಪೂರ್ತಿ ನೀಡುತ್ತದೆ. ನಾನು ಅಧ್ಯಯನ ಪ್ರವಾಸದಲ್ಲಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಕೋರಿದ ಬಳಿಕ ಉಭಯ ನಾಯಕರೂ ತಮ್ಮ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ, ಜಾಗತಿಕ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮೋದಿ-ಕ್ಸೀ ಜಿನ್ ಪಿಂಗ್ ಮಾತುಕತೆ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದು ಇಬ್ಬರೂ ನಾಯಕರು ಕಾರ್ಯತಂತ್ರ ಹಾಗೂ ದೀರ್ಘಾವಧಿಯ ದೃಷ್ಟಿಕೋನದಿಂದ ದ್ವಿಪಕ್ಷೀಯ ಸಂಬಂಧಗಳಲ್ಲಿನ ಬೆಳವಣಿಗೆಗಳನ್ನು ಪರಿಶೀಲಿಸಲಿದ್ದಾರೆ.
ವುಹಾನ್ ನಲ್ಲಿ ನಡೆಯುತ್ತಿರುವ ಶೃಂಗಸಭೆ ಡೋಕ್ಲಾಮ್ ನಂತರ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧದಲ್ಲಿ ಉಂಟಾಗಿರುವ ವಿಶ್ವಾಸಾರ್ಹತೆಯ ಬಿರುಕನ್ನು ಪುನರ್ನಿರ್ಮಿಸುವುದಕ್ಕೆ ಸಜ್ಜುಗೊಂಡಿರುವ ವೇದಿಕೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಪ್ರಧಾನಿ ಹಾಗೂ ಅಧ್ಯಕ್ಷರೊಂದಿಗೆ ಒಟ್ಟು 12 ಹಿರಿಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ.
ಪ್ರಧಾನಿ ಮೋದಿ ಹಾಗೂ ಕ್ಸೀ ಜಿನ್ ಪಿಂಗ್ ಈಸ್ಟ್ ಲೇಕ್ ಪ್ರದೇಶದಲ್ಲಿ ರಾತ್ರಿಯ ಭೋಜನ ಸವಿಯಲಿದ್ದು, ಏ.28 ರಂದು ಬೆಳಿಗ್ಗೆ 10 ಗಂಟೆಗೆ ಮತ್ತೆ ಮಾತುಕತೆ ಮುಂದುವರೆಯಲಿದೆ. ಇದೇ ವೇಳೆ ಚೀನಾ ಕಮ್ಯುನಿಸ್ಟ್ ಪಕ್ಷದ ಮಾಜಿ ನಾಯಕ ಮಾವೋ ಝೆಡಾಂಗ್ ಅವರ ನೆಚ್ಚಿನ ರಜೆಯ ತಾಣ ಎನಿಸಿರುವ ವುಹಾನ್ ನಲ್ಲಿರುವ ಈಸ್ಟ್ ಲೇಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸೀ ಜಿನ್ ಪಿಂಗ್ ಬೋಟ್ ರೈಟ್ ಕೂಡ ಮಾಡಲಿದ್ದು, ಮಧ್ಯಾಹ್ನದ ಭೋಜನದ ನಂತರ ಮಾತುಕತೆ ಸಮಾಪ್ತಿಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.