ಇಸ್ಲಾಮಾಬಾದ್: ಬಿಜೆಪಿ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲದಿದ್ದರೆ ಕಾಶ್ಮೀರ ಸಮಸ್ಯೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇತ್ಯರ್ಥಪಡಿಸುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸ್ಮರಿಸಿಕೊಂಡಿದ್ದಾರೆ.
ಇಮ್ರಾನ್ ಖಾನ್ ಜೊತೆ ನಡೆಸಿದ ಸಭೆಯಲ್ಲಿ ಕಾಶ್ಮೀರ ಸಭೆಯನ್ನು ಬಗೆಹರಿಸುವುದಾಗಿ ವಾಜಪೇಯಿ ಹೇಳಿದ್ದಾರಂತೆ. ಆ ಸಭೆಯಲ್ಲಿ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಕೂಡಾ ಪಾಲ್ಗೊಂಡಿದ್ದರು ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಯುದ್ಧ ಒಂದೇ ಪರಿಹಾರವಲ್ಲಾ, ಉಭಯ ದೇಶಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ . ಮಾತುಕತೆ ಹೊರತುಪಡಿಸಿ ಬೇರೆ ಪರ್ಯಾಯ ಮಾರ್ಗಗಳ ಮೂಲಕ ಚರ್ಚೆ ಸಾಧ್ಯವಿಲ್ಲ ಎಂದು ಅವರು ವಿದ್ಯುನ್ಮಾನ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಅಥವಾ ಮೂರು ಪರ್ಯಾಯ ಮಾರ್ಗಗಳಿಗೆ, ಆ ಮೂಲಕ ಚರ್ಚಿಸುವುದಾಗಿ ಇಮ್ರಾನ್ ಖಾನ್ ಹೇಳಿದರಾದರೂ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಈ ಬಗ್ಗೆ ಸದ್ಯದಲ್ಲಿ ಮಾತನಾಡುವುದಾಗಿ ತಿಳಿಸಿದರು.
ಎರಡು ಪರಮಾಣು ರಾಷ್ಟ್ರಗಳು ಯುದ್ಧ ಮಾಡಲು ಸಾಧ್ಯವಿಲ್ಲ. ನೆರೆಯ ಎಲ್ಲಾ ರಾಷ್ಟ್ರಗಳೊಂದಿಗೆ ಶಾಂತಿಯುತ ಒಪ್ಪಂದಕ್ಕೆ ಗಂಭೀರವಾಗಿ ಯೋಚಿಸಲಾಗುತ್ತಿದೆ. ಆದರೆ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ಇಮ್ರಾನ್ ಖಾನ್ ಹೇಳಿದರು.