ಸೌದಿ ಅರೇಬಿಯಾ ಪತ್ರಕರ್ತ ಜುಮಾಲ್ ಖಶೋಗಿ
ವಾಷಿಂಗ್ಟನ್: ಸೌದಿ ಅರೇಬಿಯಾ ಪತ್ರಕರ್ತ ಜುಮಾಲ್ ಖಶೋಗಿ ತಾನು ಸಾಯುವುದಕ್ಕೆ ಕೆಲವೇ ಕ್ಷಣಗಳ ಮುನ್ನ "ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾ ರೆನ್ನುವ ಆಡಿಯೋ ಟೇಪ್ ಅನ್ನು ಸಿಎನ್ ಎನ್ ಸುದ್ದಿ ಸಂಸ್ಥೆ ಭಾನುವಾರ ಬಹಿರಂಗಪಡಿಸಿದೆ.
ಸುದ್ದಿ ಸಂಸ್ಥೆಯು ಖಶೋಗಿ ಅವರ ಹೇಳಿಕೆಯ ಭಾಷಾಂತರ ರೂಪವನ್ನು ಪ್ರಸಾರಿಸಿದ್ದು ಇದರಿಂದಾಗಿ ಪತ್ರಕರ್ತನ ಹತ್ಯೆ ಒಂದು ಪೂರ್ವ ನಿಯೋಜಿತ ಕೃತ್ಯವೆನ್ನುವುದು ಖಚಿತವಾಗಿದೆ. ಅಲ್ಲದೆ ಹತ್ಯೆಯ ಸಮಯದಲ್ಲಿ ಹಲವು ಬಾರಿ ದೂರವಾಣಿ ಕರೆ ಮಾಡಿ ಕೃತ್ಯದ ಕುರಿತಂತೆ ಮಾಹಿತಿ ಒದಗಿಸಲಾಗುತ್ತಿತ್ತು ಎನ್ನುವುದು ಸಹ ತಿಳಿದಿದೆ. ರಿಯಾದ್ ನಲ್ಲಿನ ಉನ್ನತ ಅಧಿಕಾರಿಗಳಿಗೆ ಈ ಕರೆ ಹೋಗಿತ್ತು ಎನ್ನುವುದು ಟರ್ಕಿಯ ಸಂದೇಹವಾಗಿದೆ.
"ವಾಷಿಂಗ್ಟನ್ ಪೋಸ್ಟ್" ಪತ್ರಕರ್ತರಾಗಿದ್ದ ಜುಮಾಲ್ ಖಶೋಗಿ ಅಕ್ಟೋಬರ್ 2ರಂದು ಇಸ್ತಾಂಬುಲ್ ನ ಸೌದಿ ಕಾನ್ಸಲೇಟ್ ಕಛೇರಿ ಪ್ರವೇಶಿಸಿದ್ದ ಕೆಲವೇ ಸಮಯಕ್ಕೆ ಹತ್ಯೆಯಾಗಿದ್ದರು. ಹೀಗೆ ಸಾವಿಗೀಡಾಗುವ ಮುನ್ನ ತನ್ನ ಹಂತಕರ ವಿರುದ್ಧ ಅವರು ಸಾಕಷ್ಟು ಹೋರಾಡಿದ್ದಾರೆ ಎನ್ನುವುದು ಈ ದ್ವನಿಮುದ್ರಿಕೆಯಿಂದ ಬೆಳಕಿಗೆ ಬಂದಿದೆ. ಪತ್ರಕರ್ತನ ದೇಹವನ್ನು ಆಯುಧ ಬಳಸಿ ವಿರೂಪಗೊಳಿಸುತ್ತಿರುವ ಧ್ವನಿ ಸಹ ಸಿಎನ್ ಎನ್ ವರದಿಯಲ್ಲಿ ಸಿಕ್ಕಿದೆ.
ಟರ್ಕಿ ಗುಪ್ತಚರ ದಳ ಸಿದ್ದಪಡಿಸಿದ್ದ ಈ ದ್ವನಿ ಮುದ್ರಣ ರೂಪಾಂತರದ ಭಾಷಾಂತರ ಅವತರಣಿಕೆಯನ್ನು ಸುದ್ದಿ ಸಂಸ್ಥೆ ಪ್ರಸಾರಿಸಿದೆ.
ಈ ನಡುವೆ ಖಶೋಗಿ ಹತ್ಯೆಯ ಶಂಕಿತರನ್ನು ಗಡೀಪಾರು ಮಾಡಬೇಕೆನ್ನುವ ಟರ್ಕಿ ಬೇಡಿಕೆಯನ್ನು ಸೌದಿ ಅರೇಬಿಯಾ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ.