ಲಾಹೋರ್: ಪಾಕಿಸ್ತಾನದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಹಿರಿಯ ವಕೀಲರಾದ ಅಸ್ಮಾ ಜಹಾಂಗೀ ರ್ ಅವರು ಭಾನುವಾರ ನಿಧನರಾಗಿದ್ದು, ಅವರಿಗೆ 66 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ ಅಸ್ಮಾ ಜಹಾಂಗೀರ್ ಅವರು ಹೃದಯಾಘಾತಕ್ಕೊಳಗಾಗಿದ್ದು, ಅವರನ್ನು ಲಾಹೋರ್ ನ ಫಿರೋಝ್ ಪುರ್ ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಸ್ಮಾ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥರಾಗಿದ್ದ ಜಹಾಂಗೀರ್ ಅವರು, ಪಾಕಿಸ್ತಾನ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನಲ್ಲೂ ಕಾರ್ಯ ನಿರ್ವಹಿಸಿದ್ದರು. ಆ ಮೂಲಕ ಈ ಸ್ಥಾನ ಪಡೆದ ಮೊದಲ ಪಾಕಿಸ್ತಾನಿ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದರು. ಇನ್ನು ಕಾನೂನು ಮತ್ತು ಸಂಬಂಧಿತ ವ್ಯಾಜ್ಯಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾ ಷ್ಟ್ರೀಯ ನ್ಯಾಯಾಲಗಳಲ್ಲಿ ಜಹಾಂಗೀರ್ ಅವರು ಸೇವೆ ಸಲ್ಲಿಸಿದ್ದು, ಜನರಲ್ ಜಿಯಾ ಉಲ್ ಹಕ್ ಅವರ ಸೇನಾಡಳಿತವನ್ನು ವಿರೋಧಿಸಿ, ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಚಳವಳಿಯಲ್ಲಿ ಪಾಲ್ಗೊಂಡು 1983ರಲ್ಲಿ ಕಾರಾಗೃಹ ವಾಸ ಕೂಡ ಅನುಭವಿಸಿದ್ದರು.
1987ರಲ್ಲಿ ಪಾಕಿಸ್ತಾನದಲ್ಲಿ ಮಾನವ ಹಕ್ಕು ಆಯೋಗದ ಸಹ ಸಂಸ್ಥಾಪಕಿಯಾದರು. 2014ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ, 2010ರಲ್ಲಿ ಫ್ರೀಡಂ ಪ್ರಶಸ್ತಿ, 2010ರಲ್ಲಿ ಹಿಲಾಲ್-ಇ-ಇಮ್ತಿಯಾಜ್ ಮತ್ತು ಸಿತಾರಾ- ಇ-ಇಮ್ತಿಯಾಜ್ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.