ಇಸ್ಲಾಮಾಬಾದ್; ಸುಂಜುವಾನ್ ಸೇನಾ ಕ್ಯಾಂಪ್ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪವನ್ನು ಪಾಕಿಸ್ತಾನ ಸೋಮವಾರ ತಳ್ಳಿಹಾಕಿದೆ.
ಈ ಕುರಿತಂತೆ ಪ್ರತಿಕ್ರಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ, ಸುಂಜುವಾನ್ ಸೇನಾ ಕ್ಯಾಂಪ್ ಮೇಲಿನ ಉಗ್ರರ ದಾಳಿ ಪ್ರಕರಣದ ತನಿಖೆಗೂ ಮುನ್ನವೇ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳುವ ಮೂಲಕ ಭಾರತ ಬೇಜಾವಾಬ್ದಾರಿತನದ ಹೇಳಿಕೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಉದ್ಧೋನ್ಮಾದ ಪ್ರದರ್ಶಿಸುತ್ತಿದ್ದು, ಪಾಕಿಸ್ತಾನದ ವಿರುದ್ಧ ಅಭಿಯಾನ ನಡೆಸುತ್ತಿರುವಂತಿದೆ. ದಾಳಿ ಕುರಿತಂತೆ ಸೂಕ್ತ ತನಿಖೆಗೆ ನಡೆಸದೇ ಇದ್ದರೂ ಪಾಕಿಸ್ತಾನದ ವಿರುದ್ದ ಆಧಾರರಹಿತ ಆರೋಪ ಮಾಡುವ ಮೂಲಕ ಭಾರತ ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದೆ. ಭಾರತೀಯ ಮಾಧ್ಯಮಗಳಲ್ಲಿ ಒಂದು ನಿರ್ದಿಷ್ಟವಾದ ಭಾಗವು ಪಾಕಿಸ್ತಾನವನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಸಾರ್ವಜನಿಕ ಶಾಂತಿಯನ್ನು ಹಾಳುಮಾಡಲು ತಮ್ಮದೇ ಆದ ದ್ವಂದ್ವಾರ್ಥಗಳನ್ನು ನೀಡುತ್ತಿದೆ.
ವಿಶ್ವ ಸಮುದಾಯವು ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಅಭಿಯಾನ ಮತ್ತು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ಯುದ್ಧೋನ್ಮಾದವನ್ನು ಅರಿಯಲಿದೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.