ವಿದೇಶ

ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಭಾರತ-ಪಾಕ್ ನಡುವಿನ ಸಮಸ್ಯೆ ಇತ್ಯರ್ಥ: ಮಣಿಶಂಕರ್ ಅಯ್ಯರ್

Srinivasamurthy VN
ಕರಾಚಿ: ನಿರಂತರ ಮತ್ತು ತಡೆರಹಿತ ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಭಾರತ-ಪಾಕಿಸ್ತಾನಗಳ ನಡುವಿನ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ  ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಸೋಮವಾರ ಕರಾಚಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿರುವ ಮಣಿ ಶಂಕರ್ ಅಯ್ಯರ್ ಅವರು ಜಿಯೋ ನ್ಯೂಸ್ ನೊಂದಿಗೆ ಮಾತನಾಡಿ, ಪಾಕಿಸ್ತಾನ ಮತ್ತು ಭಾರತ ನಡುವಿನ ಸಮಸ್ಯೆ ಇತ್ಯರ್ಥಕ್ಕೆ  ಒಂದೇ ಒಂದು ಮಾರ್ಗವಿದೆ. ಅದು ಪರಸ್ಪರರ ಚರ್ಚೆ. ಉಭಯ ರಾಷ್ಟ್ರಗಳ ನಡುವೆ ನಿರಂತರ ಮತ್ತು ಅಡ್ಡಿ ರಹಿತ ಮಾತುಕತೆಯಿಂದ ಮಾತ್ರ ಸಮಸ್ಯೆ ಇತ್ಯರ್ಥವಾಗಲಿದ್ದು, ಈ ಬಗ್ಗೆ ಪಾಕಿಸ್ತಾನದ ಪ್ರಯತ್ನವನ್ನು ನಾನು  ಶ್ಲಾಘಿಸುತ್ತೇನೆ. ಭಾರತದೊಂದಿಗೆ ಪಾಕಿಸ್ತಾನ ಮತ್ತೆ ದ್ವಿಪಕ್ಷೀಯ ಮಾತುಕತೆಗೆ ಉತ್ಸುಕವಾಗಿದ್ದು, ಅದೇ ಉತ್ಸುಕತೆ ಭಾರತ ತೋರಿಸುತ್ತಿಲ್ಲ ಎಂದು ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇಸ್ಲಾಮಾಬಾದ್ ಭಾರತದೊಂದಿಗೆ ಮಾತುಕತೆಗಾಗಿ ಉತ್ಸುಕವಾಗಿದೆಯಾದರೂ ದೆಹಲಿ ಮಾತ್ರ ತನ್ನ ನೀತಿಯನ್ನು ಬದಲಿಸಿಕೊಂಡಿರುವುದೇ ಸಮಸ್ಯೆಗೆ ಕಾರಣವಾಗಿದೆ. ದೆಹಲಿ ತನ್ನ ನೀತಿ ಬದಲಿಸಿಕೊಳ್ಳಬೇಕು ಎಂದು ಅಯ್ಯರ್  ನೇರವಾಗಿ ಮೋದಿ ಸರ್ಕಾರಕ್ಕೆ ಟಾಂಗ್ ನೀಡಿದರು. ಅಂತೆಯೇ ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನವನ್ನೂ ಪ್ರೀತಿಸುತ್ತೇನೆ. ನಮ್ಮ ನೆರೆಹೊರೆಯವರನ್ನೂ ನಮ್ಮವರಂತೆ ಪ್ರೀತಿಸಬೇಕು  ಎಂಬ ಪಾಠವನ್ನು ಹಿರಿಯರು ಕಲಿಸಿದ್ದಾರೆ ಎಂದು ಅಯ್ಯರ್ ಹೇಳಿದರು. ಅಂತೆಯೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನೇತೃತ್ವದಲ್ಲಿ ರೂಪಿಸಿದ್ದ ಒಪ್ಪಂದವನ್ನು ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಳ್ಳಬೇಕು ಎಂದು  ಅಯ್ಯರ್ ಆಗ್ರಹಿಸಿದರು.
SCROLL FOR NEXT