ಇಸ್ಲಾಮಾಬಾದ್: ಮುಂಬೈ ದಾಳಿ ರೂವಾರಿ ಹಫೀಜ್ ಸಯ್ಯೀದ್ ಗೆ ಸೇರಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪಾಕಿಸ್ತಾನ ಸರ್ಕಾರ ಜಮಾತ್ ಉದ್ ದವಾ ಮತ್ತು ಅದರ ಸಹೋದರ ಸಂಘ ಸಂಸ್ಥೆಗಳನ್ನು ಅಧಿಕೃತವಾಗಿ ನಿಷೇಧಿಸಿದೆ.
ಈ ಬಗ್ಗೆ ಪಾಕಿಸ್ತಾನದ ಅಲ್ ಜಜೀರಾ ಸುದ್ದಿ ಸಂಸ್ಥೆ ವರದಿ ಬಿತ್ತರಿಸಿದ್ದು, ಹಫೀಜ್ ಸಯ್ಯೀದ್ ನೇತೃತ್ವದ ಜಮಾತ್ ಉದ್ ದವಾ ಉಗ್ರ ಸಂಘಟನೆ ಮತ್ತು ಅದರ ಸಹೋದರ ಸಂಸ್ಥೆ ಫಲಾಹ್ ಇ ಇನ್ಸಾನಿಯತ್ ಸಂಸ್ಥೆಗಳನ್ನು ಅಧಿಕೃತವಾಗಿ ನಿಷೇಧಿಸಿದೆ. ಈ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಜಮಾತ್ ಉದ್ ದವಾ ಮತ್ತು ಫಲಾಹ್ ಇ ಇನ್ಸಾನಿಯತ್ ಸಂಸ್ಥೆಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಆಂತರಿಕ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಸರ್ಕಾರದ ನಿರ್ದೇಶನದ ಮೇರೆಗೆ ಆಂತರಿಕ ಸಚಿವಾಲಯ ಈ ಸಂಘಟನೆಗಳನ್ನು ನಿಷೇಧಿಸಿದೆ. ಈಗಾಗಲೇ ಈ ಸಂಘಟನೆಗಳಿಗೆ ನೀಡಲಾಗಿದ್ದ ಎಲ್ಲ ಸೌಲಭ್ಯಗಳನ್ನೂ ಹಿಂದಕ್ಕೆ ಪಡೆಯಲಾಗಿದ್ದು, ಸಂಘಟನೆಗಳ ಕಚೇರಿ, ಶಾಲೆ, ಔಷಧಾಲಯಗಳು, ಆಸ್ಪತ್ರೆ ಮತ್ತು ಸೆಮಿನರಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ ಎಂದು ಪಾಕಿಸ್ತಾನ ಪಂಜಾಬ್ ನ ಕಾನೂನು ಸಚಿವ ರಾಣಾ ಸನಾ ಉಲ್ಲಾಹ್ ಮಾಹಿತಿ ನೀಡಿದರು.
ಹಫೀಜ್ ಸಯ್ಯೀದ್ ಲಷ್ಕರ್ ಇ ತೊಯ್ಬಾ ಸಂಘಟನೆಯ ಸಂಸ್ಥಾಪಕನಾಗಿದ್ದು, ಲಷ್ಕರ್ ಸಂಘಟನೆಯಿಂದ ಹೊರಬಂದ ಬಳಿಕ ಜಮಾತ್ ಉದ್ ದವಾ ಸಂಘಟನೆ ಕಟ್ಟಿದ್ದ. ಈತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ವಿಶ್ವಸಂಸ್ಥೆ 2012ರಲ್ಲಿ ಈತನನ್ನು ಉಗ್ರಗಾಮಿ ಎಂದು ಘೋಷಣೆ ಮಾಡಿತ್ತು. ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಈತನಿಗೆ ಸೇರಿದ ಸಂಘ ಸಂಸ್ಥೆಗಳನ್ನು ಸಾಮಾಜಿಕ ಸೇವಾ ಸಂಸ್ಥೆಗಳು ಎಂದು ಪರಿಗಣಿಸಿ ಸಕಲಸರ್ಕಾರಿ ಸೌಲಭ್ಯ ನೀಡಿ ಪೋಷಿಸುತ್ತಿತ್ತು. ಇದೀಗ ವಿಶ್ವಸಂಸ್ಥೆ ಒತ್ತಡದ ಮೇರೆಗೆ ತನ್ನ ಉಗ್ರ ನಿಗ್ರಹ ಕಾಯ್ದೆಗೆ ತಿದ್ದುಪಡಿ ಮಾಡಿರುವ ಪಾಕಿಸ್ತಾನ ಸರ್ಕಾರ ಲಷ್ಕರ್ ಇ ತೊಯ್ಬಾ, ಜಮಾತ್ ಉದ್ ದವಾ ಸೇರಿದಂತೆ 27 ಉಗ್ರ ಸಂಘಟನೆಗಳನ್ನು ನಿಷೇಧಿತ ಸಂಘಟನೆಗಳೆಂದು ಪರಿಗಣಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics