ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ಸನ್ ಮತ್ತು ಪಾಕ್ ವಿದೇಶಾಂಗ ಸಚಿವ ಖ್ಲಾಜಾ ಅಸಿಫ್ (ಸಂಗ್ರಹ ಚಿತ್ರ)
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮೆರಿಕ ವಾಪಸ್ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ, ಅಮೆರಿಕ ನೆರವಿಲ್ಲದಿದ್ದರೂ ನಾವು ನಮ್ಮ ಅಸ್ತಿತ್ವ ಕಾಯ್ದುಕೊಳ್ಳಬಲ್ಲೆವು ಎಂದು ಹೇಳಿದೆ.
ಈ ಬಗ್ಗೆ ಪಾಕಿಸ್ತಾನ ಮೂಲದ ಜಿಯೋ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು, ಅಮೆರಿಕ ನೆರವಿನ ಹೊರತಾಗಿಯೂ ಪಾಕಿಸ್ತಾನ ತನ್ನ ಅಸ್ತಿತ್ವ ಕಾಯ್ದುಕೊಳ್ಳಲಿದೆ. ಇಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಪಾಕಿಸ್ತಾನ ಇಂತಹ ಪರಿಸ್ಥಿತಿ ಎದುರಿಸಿತ್ತು. ನಮ್ಮ ಕಠಿಣ ಸಂದರ್ಭಗಳಲ್ಲಿ ಅವರು (ಅಮೆರಿಕ) ಎಂದೂ ನಮ್ಮ ಕೈ ಹಿಡಿದಿಲ್ಲ. ನಿರ್ಣಾಯಕ ಕಠಿಣ ಸಂದರ್ಭಗಳಲ್ಲಿ ನಮಗೆ ದ್ರೋಹ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಹಿಂಸಾಚಾರ ಹಾಗೂ ಉಗ್ರವಾದ ಪೋಷಣೆ ಹಿನ್ನಲೆಯಲ್ಲಿ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಿತ್ತು. ಅಲ್ಲದೆ ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಪಾಕಿಸ್ತಾನಕ್ಕೆ ಅಮೆರಿಕ ನೀಡಬೇಕಿದ್ದ ಸುಮಾರು 255 ಮಿಲಿಯನ್ ಡಾಲರ್ ನೆರವನ್ನೂ ಕೂಡ ಟ್ರಂಪ್ ಸರ್ಕಾರ ಸ್ಥಗಿತಗೊಳಿಸಿತ್ತು.