ಇಸ್ಲಾಮಾಬಾದ್: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಯಂತೆ ಅಮೆರಿಕ ಸರ್ಕಾರದಿಂದ ಛೀಮಾರಿ ಹಾಕಿಸಿಕೊಂಡು ಆರ್ಥಿತ ಮತ್ತು ಭದ್ರತಾ ನೆರವು ಅಮಾನತು ಮಾಡಿಸಿಕೊಂಡಿರುವ ಪಾಕಿಸ್ತಾನ ಇದೀಗ ಹಫೀಜ್ ಸಯ್ಯೀದ್, ಅಜರ್ ಮಸೂದ್ ರಂತಹವರ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದರೆ 10 ವರ್ಷ ಜೈಲು ಶಿಕ್ಷೆ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಉಗ್ರಪರ ನಿಲುವುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ ತನ್ನ ಆರ್ಥಿಕ ಮತ್ತು ಭದ್ರತಾ ನೆರವನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ಪಾಕ್ ಸರ್ಕಾರ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಕಠಿಣ ನಿಲುವು ತಳೆಯುವುದಾಗಿ ಎಚ್ಚರಿಕೆ ನೀಡಿತ್ತು. ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ನಿನ್ನೆಯಷ್ಟೇ ಹಫೀಜ್ ಸಯ್ಯೀದ್, ಅಜರ್ ಮಸೂದ್ ಅವರ ಸಂಘಟನೆಗಳು ಸೇರಿದಂತೆ ಒಟ್ಟು 72 ಉಗ್ರ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು.
ಇದರ ಬೆನ್ನಲ್ಲೇ ಇಂದು ಅದರ ಮುಂದುವರಿದ ಭಾಗ ಎಂಬಂತೆ ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರಿಗೆ 10 ವರ್ಷ ಜೈಲು ಮತ್ತು 10 ಮಿಲಿಯನ್ ಹಣವನ್ನು ದಂಡವಾಗಿ ವಿಧಿಸುತ್ತೇನೆ ಎಂದು ಎಚ್ಚರಿಕೆ ನೀಡಿದೆ.
ಇನ್ನು ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕ್ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ ಬೆನ್ನಲ್ಲೇ, ಪಾಕಿಸ್ತಾನದ ವಿರುದ್ಧ ಕೆಂಡಕಾರಿರುವ ಅಮೆರಿಕ ಸರ್ಕಾರ, ಉಗ್ರ ಸಂಘಟನೆಗಳನ್ನು ನಾಶ ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದೆ. ತಾಲಿಬಾನ್ ಮತ್ತು ಹಖ್ಖಾನಿ ಉಗ್ರ ಜಾಲವನ್ನು ನಿರ್ನಾಮ ಮಾಡಬೇಕೆಂದು ಪಾಕಿಸ್ಥಾನಕ್ಕೆ ಮನವರಿಕೆ ಮಾಡವಲ್ಲಿನ ಕ್ರಮವಾಗಿ ಭದ್ರತಾ ನೆರವನ್ನು ನಿಲ್ಲಿಸುವ ಮಾರ್ಗವಲ್ಲದೆ ಬೇರೆ ಉಪಾಯಗಳೂ ತಮ್ಮಲ್ಲಿ ಇವೆ ಎಂದು ಅಮೆರಿಕ ಸ್ಪಷ್ಟಪಡಿಸಿತ್ತು. ಭವಿಷ್ಯದಲ್ಲಿ ಪಾಕಿಸ್ತಾನದ ನಡೆಯನ್ನು ಗಮನಿಸಿ ಅದರ ಆಧಾರದ ಮೇಲೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು.