ಕಿಂಗ್ ಅಬ್ದುಲ್ಲಾ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಿಸಿದ ಸೌದಿ ಮಹಿಳೆಯರು
ಜೆಡ್ಡಾ: ಸೌದಿ ಅರೇಬಿಯಾದಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯ ವೀಕ್ಷಿಸುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ.
ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನ ಮಹಿಳಾ ಸಮಾನತೆ ಸುಧಾರಣಾ ಕ್ರಮಗಳ ಪರಿಣಾಮ ಶುಕ್ರವಾರ ಜೆಡ್ಡಾದಲ್ಲಿ ನಡೆದ ಫುಟ್ ಬಾಲ್ ಪಂದ್ಯದ ವೀಕ್ಷಣೆಗೆ ಸೌದಿ ಮಹಿಳೆಯರು ಆಗಮಿಸಿದ್ದರು. ಈ ಅಪರೂಪದ ಕ್ಷಣಕ್ಕೆ ಇಲ್ಲಿನ ಕಿಂಗ್ ಅಬ್ದುಲ್ಲಾ ಸ್ಟೇಡಿಯಂ ಸಾಕ್ಷಿಯಾಗಿತ್ತು. ಪುರುಷರು ಆಡುವ ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಮಹಿಳೆಯರಿಗೆ ನಿಷೇಧವಿತ್ತು. ಇತ್ತೀಚೆಗಷ್ಟೇ ಸೌದಿಯಲ್ಲಿ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು. ಅದರಂತೆ ಮಹಿಳಾ ಸಮಾನತೆ ಕೂಡ ಇದರಲ್ಲಿ ಸೇರಿತ್ತು.
ಶುಕ್ರವಾರ ಕಿಂಗ್ ಅಬ್ದುಲ್ಲಾ ಸ್ಟೇಡಿಯಂನಲ್ಲಿ ಅಲ್ ಅಹ್ಲಿ ಮತ್ತು ಅಲ್ ಬತಿನ್ ಎಂಬ ಎರಡು ತಂಡಗಳ ನಡುವೆ ಫುಟ್ಬಾಲ್ ಪಂದ್ಯವನ್ನು ಏರ್ಪಡಿಸಲಾಗಿತ್ತು. ಈ ಪಂದ್ಯ ವೀಕ್ಷಣೆಗಾಗಿ ಕುಟುಂಬವೊಂದರ ಪತ್ನಿ ಮತ್ತು ಹೆಣ್ಣು ಮಕ್ಕಳು ಆಗಮಿಸಿದ್ದರು. ಇನ್ನು ಮಹಿಳಾ ಸಮಾನತೆಗಾಗಿ ಸುಧಾರಣಾ ಕ್ರಮಗಳನ್ನು ಘೋಷಣೆ ಮಾಡಿರುವ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಗೆ ಸೌದಿ ಮಹಿಳೆಯರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕುಟುಂಬ ಸಮೇತ ಪಂದ್ಯ ವೀಕ್ಷಣೆ ಮಾಡಿದ ಬಳಿಕ ತಮ್ಮ ಸಂತಸ ಹಂಚಿಕೊಂಡಿರುವ ಮುನೀರಾ ಅಲ್ ಗಮ್ದಿ ಎಂಬುವವರು, "ಇಂಥದ್ದೊಂದು ಬೆಳವಣಿಗೆ ಈ ಹಿಂದೆಯೇ ನಡೆಯಬೇಕಿತ್ತು, ಈಗ ಸರಿಯಾದ ಸಮಯಕ್ಕೆ ಜಾರಿಗೊಂಡಿರುವುದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುವೆ. ಬರಲಿರುವ ಇನ್ನಷ್ಟು ಅವಕಾಶಗಳು ಮಹಿಳೆಯರ ಪಾಲಿಗೆ ಸಂತೋಷಕರವಾಗಿರಲಿ" ಎಂದು ಹೇಳಿದ್ದಾರೆ.
ಅಲ್ಲದೆ ಜೆಡ್ಡಾ, ದಮಾಮ್, ರಿಯಾದ್ ಗಳಲ್ಲಿ ಪಂದ್ಯಗಳನ್ನು ಕುಟುಂಬ ಸಮೇತ ವೀಕ್ಷಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಸೌದಿಯ ಜನರಲ್ ಸ್ಪೋರ್ಟ್ಸ್ ಅಥಾರಿಟಿ ಹೇಳಿದೆ. ಕಟ್ಟಾ ಸಾಂಪ್ರದಾಯಿಕ ಸೌದಿಯಲ್ಲಿ ಮಹಿಳೆಗೆ ಕಾರು ಚಾಲನೆ ಪರವಾನಗಿ ನೀಡಿದ ಕೆಲವೇ ತಿಂಗಳ ಬಳಿಕ ಗುರುವಾರ ಮಹಿಳೆಯರಿಗಾಗಿಯೇ ಮೊದಲ ಬಾರಿಗೆ ಕಾರು ಪ್ರದರ್ಶನ ಕೂಡ ಆಯೋಜಿಸಲಾಗಿತ್ತು. ಶನಿವಾರವೂ ಈ ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯ ನಡೆಯಲಿದೆ. ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿಯಲ್ಲಿ ಮಹಿಳಾ ಸಮಾನತೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂರುವ ಮೂಲಕ ಯುವಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.