ವಿದೇಶ

ವಿಜಯ್ ಮಲ್ಯ ಹಸ್ತಾಂತರ ಪ್ರಕರಣ: ಮುಂದಿನ ವಿಚಾರಣೆ ಅನಿಶ್ಚಿತ

Lingaraj Badiger
ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಲಂಡನ್ ಕೋರ್ಟ್ ನಲ್ಲಿ ಯಾವುದೇ ವಿಚಾರಣೆ ನಡೆಯಲಿಲ್ಲ. ಹೀಗಾಗಿ ಮುಂದಿನ ವಿಚಾರಣೆಯೂ ಅನಿಶ್ಚಿತವಾಗಿದೆ. 
ವೆಸ್ಟ್‌ ಮಿನ್‌ಸ್ಟರ್‌ ಕೋರ್ಟ್‌ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುತ್ನೋಟ್ ಅವರು ಇಂದು ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ನಡೆಸಬೇಕಾಗಿತ್ತು. ಆದರೆ ಪರಸ್ಪರ ಅನುಕೂಲಕರವಾದ ದಿನಾಂಕಕ್ಕೆ ಸಂಬಂಧಿಸಿದಂತೆ ವಕೀಲರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಯಾವುದೇ ವಿಚಾರಣೆ ನಡೆಯಲಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಲಾಗಿದ್ದು, ಪರಸ್ಪರ ಅನುಕೂಲಕರ ದಿನಾಂಕಕ್ಕೆ ವಕೀಲರು ಒಪ್ಪಿಕೊಳ್ಳದಿದ್ದರಿಂದ ಪ್ರಕರಣದ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಆದರೆ ಮುಂದಿನ ಕೆಲವೇ ವಾರಗಳಲ್ಲಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆಯ ದಿನಾಂಕ ಪ್ರಕಟಿಸುವುದಾಗಿ ಲಂಡನ್ ಕೋರ್ಟ್ ತಿಳಿಸಿದೆ.
ವಂಚನೆ ಹಾಗೂ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಿಜಯ್ ಮಲ್ಯಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ಡಿಸೆಂಬರ್ 4ರಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಲಿದೆ.
ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.
9 ಸಾವಿರ ಕೋಟಿ ರುಪಾಯಿ ಸಾಲ ಮಾಡಿಕೊಂಡು ದೇಶದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಹಾಗೂ ಕೋರ್ಟ್ ಗಳಿಂದ ಹಲವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇದೀಗ ಮಲ್ಯ ಅವರನ್ನು ದೇಶಕ್ಕೆ ಕರೆತರುವ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.
SCROLL FOR NEXT