ದಾವೋಸ್: ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್) ಸಿದ್ಧಪಡಿಸಿರುವ ಈ ವರ್ಷದ ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ 62ನೇ ಸ್ಥಾನ ಪಡೆಯುವ ಮೂಲಕ ಚೀನಾ ಹಾಗೂ ಪಾಕಿಸ್ತಾನಕ್ಕಿಂತಲೂ ಕೆಳಗೆ ಕುಸಿದಿದೆ.
ಡಬ್ಲ್ಯುಇಎಫ್ ಇಂದು ಬಿಡುಗಡೆ ಮಾಡಿರುವ ವಿಶ್ವದ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ 62ನೇ ಸ್ಥಾನದಲ್ಲಿದೆ. ಚೀನಾ 26ನೇ ಸ್ಥಾನಪಡೆದರೆ, ಪಾಕಿಸ್ಥಾನ 47ನೇ ಸ್ಥಾನ ಪಡೆಯುವ ಮೂಲಕ ಭಾರತವನ್ನು ಹಿಂದಿಕ್ಕಿದೆ. ಭಾರತದ ಈ ಸ್ಥಿತಿ ಹೀಗೆಯೇ ಮುಂದುವರಿದಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮುಜುಗರವಾಗಲಿದೆ ಎಂದು ಭಾವಿಸಲಾಗಿದೆ.
ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ನಾರ್ವೆ ವಿಶ್ವದಲ್ಲೇ ಅತ್ಯುನ್ನತ ಮುಂದುವರಿದ ಆರ್ಥಿಕತೆಯ ದೇಶವಾಗಿ ಮೂಡಿ ಬಂದಿದೆ. ಉದಯೋನ್ಮುಖ ಆರ್ಥಿಕತೆಗಳ ಪೈಕಿ ಲಿಥುವೇನಿಯ ಅಗ್ರಸ್ಥಾನದಲ್ಲಿದೆ.
ಡಬ್ಲ್ಯುಇಎಫ್ ಪ್ರತಿ ವರ್ಷ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ದಾವೋಸ್‌ನಲ್ಲಿ ಈ ಬಾರಿ ಅದರ ವಾರ್ಷಿಕ ಸಭೆ ಆರಂಭವಾಗುವುದಕ್ಕೆ ಮುನ್ನ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದಾವೋಸ್ ಆರ್ಥಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಹಲವು ನಾಯಕರು ಭಾಗವಹಿಸುತ್ತಾರೆ.
ಸಮಗ್ರ ಅಭಿವೃದ್ಧಿ ಸೂಚ್ಯಂಕ ಪಟ್ಟಿಯನ್ನು ತಯಾರಿಸುವಾಗ ದೇಶವೊಂದರ ಜನಜೀವನ ಮಟ್ಟ, ಪರಿಸರ ಸಹನಶೀಲತೆ ಮತ್ತು ಇನ್ನಷ್ಟು ಋಣಭಾರದಿಂದ ಮುಂದಿನ ತಲೆಮಾರುಗಳ ರಕ್ಷಣೆಯೇ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಡಬ್ಲ್ಯುಇಎಫ್ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos