ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್
ಯುನೈಟೆಡ್ ನೇಷನ್ಸ್: ಕಾಶ್ಮೀರ ವಿವಾದವನ್ನು ಬಗೆಹರಿಸಲು ಯಾವುದೇ ಮಧ್ಯಸ್ಥಿಕೆ ವಹಿಸುವದನ್ನು ವಿಶ್ವ ಸಂಸ್ಥೆ ತಳ್ಳಿ ಹಾಕಿದೆ. ಎರಡೂ ಪಕ್ಷಗಳು ಒಪ್ಪಿಕೊಳ್ಳದ ಹೊರತೂ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತನ್ನ ಗಡಿಗುಂಟ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಬಗೆಗೆ ತಾವೇ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಮುಂಡಾಗಬೇಕು ಎಂದು ಅವರು ಹೇಳಿದ್ದಾರೆ..
ಉತ್ತಮ ತತ್ವಗಳಿಗೆ ಒಳಪಟ್ಟು ವಿಶ್ವಸಂಸ್ಥೆ ಜಾಗತಿಕ ವಿವಾದಗಳ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸದಾ ಸಿದ್ದವಿರುತ್ತದೆ. ಆದರೆ ಇದಕ್ಕೆ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ವಕ್ತಾರರಾದ ಸ್ಟೀಫನ್ ಡುವಾರಾರಿಕ್ ಹೇಳಿದ್ದಾರೆ.
ಬಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಕಳೆದ ಹತ್ತು ದಿನಗಳಿಂದ ಇರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು " ಹತ್ತು ದಿನದಲ್ಲಿ ಏನಾಗಿದೆ...? ನಾವು ಸದಾ ಗಮನಿಸಿದ್ದೇವೆ. ತಾತ್ವಿಕವಾಗಿ ಉತ್ತಮ ಉದ್ದೇಶದ ಮಧ್ಯಸ್ಥಿಕೆಗೆ ಗುಟೆರೆಸ್ ಕಛೇರಿ ಯಾವಾಗಲೂ ತೆರೆದಿರುತ್ತದೆ, ಆದರೆ ಇದಕ್ಕಾಗಿ ಪ್ರತಿಯೊಬ್ಬರೂ ವಿಶ್ವಸಂಸ್ಥೆ ಸಹ ಒಳಗೊಂಡಂತೆ ಸಮ್ಮತಿ ಸೂಚಿಸಬೇಕಿದೆ. ಈ ವಿಚಾರದ ಬಗ್ಗೆ ನಾನು ನಿರ್ದಿಷ್ಟವಾಗಿ ಮಾತನಾಡುವುದಿಲ್ಲ, ಆದರೆ ಇಂತಹಾ ಸಮಸ್ಯೆಗಳು, ಯಾವುದೇ ವಿಷಯದ ಬಗ್ಗೆ, ಪ್ರಧಾನ ಕಾರ್ಯದರ್ಶಿಗಳ ಕಛೇರಿ ಮದ್ಯಸ್ಥಿಕೆ ವಹಿಸಲು ಯಾವಾಗಲೂ ಲಭ್ಯವಿರುತ್ತವೆ" ಎಂದು ಹೇಳಿದರು.
"ಪ್ರಧಾನ ಕಾರ್ಯದರ್ಶಿಗಳು ಮಾತುಕತೆ ಮೂಲಕ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಎರಡೂ ಕಡೆಯವರನ್ನು ಪ್ರೋತ್ಸಾಹಿಸುತ್ತಾರೆ" ಸ್ಟೀಫನ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ದಿನ ದಿನಕ್ಕೆ ಬಿಗಡಾಯಿಸುತ್ತಿದ್ದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ಮತ್ತು ಸೈನ್ಯದಿಂದ ಕದನ ವಿರಾಮದ ಉಲ್ಲಂಘನೆ, ಸರಣಿ ದಾಳಿಯಿಂದಾಗಿ ಎರಡೂ ಕಡೆಗಳಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಾವುದೇ ತೃತೀಯ ಶಕ್ತಿಗಳ ಹಸ್ತಕ್ಷೇಪವನ್ನು ಭಾರತ ವಿರೋಧಿಸುತ್ತಿದೆ. ಆದರೆ ಪಾಕಿಸ್ತಾನವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಇಂತಹಾ ಮಧ್ಯಸ್ಥಿಕೆ ಬಯಸಿದೆ.