ವಿದೇಶ

ದಾವೋಸ್ ನಲ್ಲಿ ಅಮೆರಿಕದ ಉದ್ಯಮ ರಕ್ಷಣಾ ನೀತಿ ವಿರೋಧಿಸಿದ ಪ್ರಧಾನಿ ಮೋದಿ ಭಾಷಣಕ್ಕೆ ಚೀನಾ ಮೆಚ್ಚುಗೆ

Lingaraj Badiger
ಬೀಜಿಂಗ್: ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ಚೀನಾ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ಮಂಗಳವಾರ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಅಮೆರಿಕದ ದೇಶಿಯ ಉದ್ಯಮ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಹೇಳಿದ್ದರು.
ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ, ಭಯೋತ್ಪಾದನೆ ಮತ್ತು ಹವಮಾನ ಬದಲಾವಣೆ ಸೇರಿದಂತೆ ಜಗತ್ತು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಪ್ರಧಾನಿ ಮೋದಿ ಅವರ ದಾವೋಸ್ ಭಾಷಣವನ್ನು ಸ್ವಾಗತಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್‌ ಅವರು, ಪ್ರಧಾನಿ ಮೋದಿ ಅವರು ರಕ್ಷಣಾ ನೀತಿಯನ್ನು ಟೀಕಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅವರ ಜಾಗತೀಕರಣದ ಪ್ರವೃತ್ತಿಯನ್ನು ತೋರಿಸಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಸೇರಿದಂತೆ ಎಲ್ಲ ದೇಶಗಳ ಹಿತಾಸಕ್ತಿಗಳನ್ನು ಕಾಪಾಡಲು ರಕ್ಷಣಾ ನೀತಿಯ ವಿರುದ್ಧ ಹೋರಾಟಕ್ಕೆ ಉತ್ತೇಜನ ನೀಡಲಿದೆ ಎಂದಿದ್ದಾರೆ.
ಎಲ್ಲಾ ರಾಷ್ಟ್ರಗಳ ಲಾಭಕ್ಕಾಗಿ ಜಾಗತಿಕರಣದ ಪ್ರಕ್ರಿಯೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಭಾರತ ಮತ್ತು ಇತರೆ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಚೀನಾ ಬಯಸುತ್ತದೆ ಎಂದು ಹು ಚುನ್ಯಿಂಗ್‌ ಹೇಳಿದ್ದಾರೆ.
SCROLL FOR NEXT