ವಿದೇಶ

ಟೆಕ್ಸಾಸ್'ನಲ್ಲಿ ಭಾರತೀಯ ಮೂಲದ ಟೆಕ್ಕಿ ಸಾವು

Manjula VN
ಹೌಸ್ಟನ್: ಅಮೆರಿಕದ ಟೆಕ್ಸಾಸ್'ನಲ್ಲಿ ಭಾರತೀಯ ಮೂಲದ ಟೆಕ್ಕಿಯೊಬ್ಬರ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 
ವೆಂಕನ್ನಗಾರಿ ಕೃಷ್ಣ ಚೈತನ್ಯ (30) ಮೃತಪಟ್ಟಿರುವ ಭಾರತೀಯ ಮೂಲದ ಟೆಕ್ಕಿಯಾಗಿದ್ದಾರೆ. 3 ವರ್ಷಗಳ ಹಿಂದಷ್ಟೇ ಅಮೆರಿಕಾಗೆ ತೆರಳಿದ್ದ ಚೈತನ್ಯ ಅವರು ಟೆಕ್ಸಾಸ್'ನ ಡಲ್ಲಾಸ್ ಉಪನಗರವಾಗಿರುವ ಅರ್ಲಿಂಗ್ಟನ್'ನಲ್ಲಿ ಅತಿಥಿ ಗೃಹವೊಂದರಲ್ಲಿ ವಾಸವಿದ್ದರು ಎಂದು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಚೈತನ್ಯ ಅವರು  ಕಾಗ್ನಿಜಂಟ್ ಟೆಕ್ನಾಲಜೀಸ್'ನಲ್ಲಿ ಆಗ್ನೇಯ ಏರ್'ಲೈನ್ಸ್ ಪ್ರಾಜೆಕ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅತಿಥಿ ಗೃಹದಲ್ಲಿದ್ದ ಚೈತನ್ಯ ಅವರು ಹಲವು ಗಂಟೆಗಳಾದರೂ ಹೊರಗೆ ಬಂದಿರಲಿಲ್ಲ. ಹೀಗಾಗಿ ಮಾಲೀಕರು ಮನೆಯ ಬಾಗಿಲನ್ನು ಒಡೆದು ಒಳ ನೋಡಿದ್ದಾರೆ. ಈ ವೇಳೆ ಚೈತನ್ಯ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 
ಚೈತನ್ಯ ಕುಟುಂಬಸ್ಥರು ತೆಲಂಗಾಣ ರಾಜ್ಯದಲ್ಲಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಚೈತನ್ಯ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹವನ್ನು ಭಾರತಕ್ಕೆ ಹಸ್ತಾಂತರ ಮಾಡಲು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. 
SCROLL FOR NEXT