ಲಾಹೋರ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನವಣಾ ರ್ಯಾಲಿಗಳನ್ನು ಗುರಿಯಾಗಿಸಿಕೊಂಡು ಉಗ್ರರು ಬಾಂಬ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 75 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದ ಮಸ್ತುಂಗ್ ಪ್ರದೇಶದಲ್ಲಿ ಉಗ್ರರು ಈ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಟ 75 ಮಂದಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಅಂತೆಯೇ ಘಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನೆಯಲ್ಲಿ ಬಲೂಚಿಸ್ತಾನ ಅವಾಮಿ ಪಾರ್ಟಿಯ ಮುಖಂಡ ಸಿರಾಜ್ ರೈಸಾನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ರೈಸಾನಿ ಅವರನ್ನು ಖ್ವೆಟ್ಟಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದ ಕುರಿತು ವೈದ್ಯರು ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಅಯೂಬ್ ಅಚ್ಕಜೈ ಹೇಳಿದ್ದಾರೆ.