ಇಸ್ಲಾಮಾಬಾದ್: ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದು, ಲಂಡನ್‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಲಾಹೋರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರಿಯಮ್ ರನ್ನು ಬಂಧಿಸಲಾಗಿದೆ.
ಲಂಡನ್‍ನಿಂದ ಅಬುದಾಬಿಗೆ ಬಂದ ನವಾಜ್ ಶರೀಫ್ ಕುಟುಂಬ ಬಳಿಕ ಅಲ್ಲಿಂದ ಲಾಹೋರ್ ಗೆ ಬಂದಿಳಿದಿದೆ. ವಿಮಾನ ನಿಲ್ದಾಣಕ್ಕೆ ಬಂದ ನನಾಜ್ ಷರೀಫ್ ಅವರನ್ನು ಪಾಕಿಸ್ತಾನದ ನ್ಯಾಬ್ ತಂಡದ ಅಧಿಕಾರಿಗಳು ಬಂಧಿಸಿದ್ದು,
ನವಾಝ್ ಶರೀಫ್ ರೊಂದಿಗೆ ಅವರ ಪುತ್ರಿ ಮರಿಯಂ ನವಾಝ್ ರನ್ನೂ ಕೂಡ ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ತಿಳಿಸಿವೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಲಾಹೋರ್‍ನಲ್ಲಿ ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಶರೀಫ್ ತಾಯಿ ಬೇಗಂ ಶಮೀಮ್ ಅಖ್ತರ್ ಹಾಗೂ ಶೆಬಾಝ್ ಶರೀಫ್‍ಗೆ ಏರ್ ಪೋರ್ಟ್ ಗೆ ಒಳಗೆ ಹೋಗಲು ಅನುಮತಿ ನೀಡಲಾಗಿದೆ. ಏರ್ ಪೋರ್ಟ್ ಹೊರಗಡೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು ಶರೀಫ್ ಪರ ಘೋಷಣೆ ಕೂಗುತ್ತಿದ್ದಾರೆ. ಏರ್ ಪೋರ್ಟ್ ಸುತ್ತಲೂ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ.
ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾಗಿ ನವಾಝ್ ಶರೀಫ್‍ಗೆ 10 ವರ್ಷ ಹಾಗೂ ಹಾಗೂ ಪುತ್ರಿ ಮರಿಯಂಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ಸುಪ್ರಿಂ ಕೋರ್ಟ್ ತೀರ್ಪು ನೀಡಿತ್ತು.