ಇಸ್ಲಾಮಾಬಾಬ್: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ಅವರು ಸಿಹಾಲ ರೆಸ್ಟ್ ಹೌಸ್ ಜೈಲಿಗೆ ಸ್ಥಳಾಂತರವಾಗಲು ನಿರಾಕರಿಸಿದ್ದಾರೆ.
ಅಕ್ರಮವಾಗಿ ಸಂಪಾದಿಸಿದ ಹಣದಿಂದ ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಕೌಂಟಬಲಿಟಿ ಕೋರ್ಟ್ ನವಾಜ್ ಷರೀಫ್ ಅವರಿಗೆ 10 ವರ್ಷ, ಪುತ್ರಿ ಮರ್ಯಮ್ ಗೆ 7 ವರ್ಷ ಹಾಗೂ ಅಳಿಯ ಎಂ ಸಫ್ದಾರ್ ಅವರಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಕಳೆದ ಜುಲೈ 13ರಂದು ಲಾಹೋರ್ ನಲ್ಲಿ ಬಂಧಿಸಲಾಗಿತ್ತು.
ಈ ಮೂವರು ಈಗ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದು, ಅಲ್ಲಿ ಮಹಿಳಾ ಕೈದಿಗಳಿಗೆ ಸೂಕ್ತ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಮರ್ಯಮ್ ಅವರನ್ನು ಸಿಹಾಲ ರೆಸ್ಟ್ ಹೌಸ್ ಜೈಲಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮರ್ಯಮ್ ಅವರು, ತಾವು ಭಾರಿ ಭದ್ರತೆ ಇರುವ ಅಡಿಯಾಲ ಜೈಲಿನಲ್ಲೇ ತಮ್ಮ ತಂದೆಯೊಂದಿಗೆ ಇರುವುದಾಗಿ ಹೇಳಿದ್ದಾರೆ.
ತಾನು ತನ್ನ ತಂದೆ ಮತ್ತು ಪತಿಯೊಂದಿಗೆ ಇರುವುದಾಗಿ ಮರ್ಯಮ್ ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಇಸ್ಲಾಮಾಬಾದ್ ನ ಉಪ ನಗರದಲ್ಲಿರುವ ಸಿಹಾಲ ರೆಸ್ಟ್ ಹೌಸ್ ಅನ್ನು ಈಗ ಉಪ ಜೈಲ್ ಆಗಿ ಪರಿವರ್ತಿಸಲಾಗಿದೆ ಎಂದು ಇಸ್ಲಾಮಾಬಾದ್ ಮುಖ್ಯ ಆಯುಕ್ತರು ತಿಳಿಸಿದ್ದಾರೆ.