ವಿದೇಶ

ಪಾಕಿಸ್ತಾನ ಚುನಾವಣೆ: 16 ವರ್ಷಗಳ ಬಳಿಕ ಸಂಸದನಾಗಿ ಹಿಂದೂ ವ್ಯಕ್ತಿಯ ಆಯ್ಕೆ

Srinivasamurthy VN
ಇಸ್ಲಾಮಾಬಾದ್‌: 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಸಂಸತ್ ಗೆ ಹಿಂದೂ ವ್ಯಕ್ತಿಯೋರ್ವ ಆಯ್ಕೆಯಾಗಿದ್ದು, ಮಹೇಶ್ ಕುಮಾರ್ ಮಲಾನಿ ಎಂಬುವವರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯಿಂದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಕೊನೆಗೂ ಮುಕ್ತಾಯವಾಗಿದ್ದು, ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಅಧಿಕಾರ ರಚನೆಯತ್ತ ಸಿದ್ಧತೆ ನಡೆಸಿಕೊಂಡಿದೆ. ಇನ್ನು ಚುನಾವಣೆಯಲ್ಲಿ ಕೆಲ ಅಚ್ಚರಿ ಫಲಿತಾಂಶಗಳು ಬಂದಿದ್ದು, ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಮೇತರರಿಗೂ ಮತದಾನಕ್ಕೆ ಅವಕಾಶ ನೀಡಿದ 16 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಹಿಂದೂ ಅಭ್ಯರ್ಥಿಯೊಬ್ಬರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯಿಂದ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಸಿಂಧ್ ಪ್ರಾಂತ್ಯದ ರಾಷ್ಟ್ರೀಯ ಅಸೆಂಬ್ಲಿ(NA-222)ಗೆ ತರ್ಪಾರ್ಕರ್-2 ಕ್ಷೇತ್ರದಿಂದ ಮಹೇಶ್ ಕುಮಾರ್ ಮಲಾನಿ ಸ್ಪರ್ಧಿಸಿದ್ದರು. ಇದೀಗ ಕಣದಲ್ಲಿದ್ದ 14 ಅಭ್ಯರ್ಥಿಗಳನ್ನು ಸೋಲಿಸಿರುವ ಮಹೇಶ್‌ ಮೊದಲ ಬಾರಿಗೆ ಜಯ ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಗ್ರಾಂಡ್‌ ಡೆಮಾಕ್ರಟಿಕ್‌ ಅಲಯನ್ಸ್‌ನ ಅಭ್ಯರ್ಥಿ ಅರಬ್‌ ಜಕಾಉಲ್ಲಾ ವಿರುದ್ಧ ಮಲಾನಿ 1,06,630 ಮತಗಳನ್ನು ಪಡೆದು 87,251 ಮತಗಳ ಭಾರಿ ಅಂತರದಿಂದ ಜಯ ಸಾಧಿಸಿದ್ದಾರೆ.
ರಾಜಸ್ಥಾನಿ ಪುಷ್ಕಾರ್ನಾ ಬ್ರಾಹ್ಮಣ ರಾಜಕಾರಣಿಯಾದ ಮಲಾನಿ ಅವರು ಈ ಮೊದಲು 2003-08ರಲ್ಲಿ ಪಿಪಿಪಿಯಿಂದ ನಾಮನಿರ್ದೇಶನಗೊಂಡು ಸಂಸತ್ತಿನ ಸದಸ್ಯರಾಗಿದ್ದರು.
2013 ರಲ್ಲಿ ಸಿಂಧ್ ವಿಧಾನಸಭೆಯ ಥಾರ್ಪಾಕರ್‌ -3ರಲ್ಲಿ ಸಾಮಾನ್ಯ ಸ್ಥಾನವನ್ನು ಗೆದ್ದ ಬಳಿಕ ಮಹೇಶ್‌ ಮಲಾನಿ ಅವರು ಪ್ರಾಂತೀಯ ಅಸೆಂಬ್ಲಿಯ ಮೊದಲ ಮುಸ್ಲಿಮೇತರ ಸದಸ್ಯರಾಗಿದ್ದರು. ಕಳೆದ ನವಾಜ್ ಷರೀಫ್ ಸರ್ಕಾರದ ಅಧಿಕಾರಾವಧಿಯಲ್ಲಿ ಆಹಾರ ಸಮಿತಿ ಅಧ್ಯಕ್ಷ ಸ್ಥಾನವೂ ಸೇರಿದಂತೆ ನಾನಾ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
2002ರಲ್ಲಿ ಅಂದಿನ ರಾಷ್ಟ್ರಪತಿ ಜನರಲ್‌ ಫರ್ವೇಜ್‌ ಮುಷರಫ್‌ ಮಸೂದೆಯೊಂದನ್ನು ರಚಿಸಿ ಸಂವಿಧಾನದಲ್ಲಿ ತಿದ್ದುಪಡಿ ತಂದ ಬಳಿಕ ಮುಸ್ಲಿಮೇತರರು ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಯಲ್ಲಿ ಮತ ಚಲಾಯಿಸುವ ಮತ್ತು ಚುನಾವಣೆಗೆ ಸ್ಪರ್ಧಿಸುವ ಅಧಿಕಾರವನ್ನು ನೀಡಲಾಗಿತ್ತು. ಇದಲ್ಲದೆ ಸೆನೆಟ್, ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಮೀಸಲು ಸ್ಥಾನಗಳನ್ನು ಹೊಂದಿದ್ದಾರೆ.
ಇನ್ನು ಕಳೆದ ಮಾರ್ಚ್ ನಲ್ಲಿ ಮತ್ತದೇ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಇದೇ ಥಾರ್ಪಕರ್ ನಿಂದ ಕೃಷ್ಣ ಕುಮಾರಿ ಅವರು ಸೆನೆಟ್ ಗೆ ಆಯ್ಕೆಯಾಗಿದ್ದರು. ಮಹಿಳೆಯರಿಗೆ ಮೀಸಲಾಗಿದ್ದ ಈ ಸ್ಥಾನದಲ್ಲಿ ಕೃಷ್ಣ ಕುಮಾರಿ ಆಯ್ಕೆಯಾಗುವ ಮೂಲಕ ಸಂಸತ್ ಗೆ ಆಯ್ಕೆ ಮೊಟ್ಟ ಮೊದಲ ಹಿಂದೂ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದರು.
SCROLL FOR NEXT