ವಿದೇಶ

ಪಾಕ್ ಚುನಾವಣೆಯಲ್ಲಿ ಹಫೀಜ್ ಸಯ್ಯೀದ್ ಸ್ಪರ್ಧೆ ಇಲ್ಲ, ಆದರೆ 200 ಕ್ಷೇತ್ರಗಳಲ್ಲಿ ಜೆಯುಡಿ ಸ್ಪರ್ಧೆ!

Srinivasamurthy VN
ಇಸ್ಲಾಮಾಬಾದ್: ಬಹು ನಿರೀಕ್ಷಿತ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಮುಂಬೈ ದಾಳಿ ರೂವಾರಿ ಉಗ್ರ ಹಫೀಜ್ ಸಯ್ಯೀದ್ ಸ್ಪರ್ಧಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಕುಖ್ಯಾತ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾದ ಅಂಗ ಸಂಸ್ಥೆಯಾದ ಜಮಾತ್ ಉದ್ ದವಾ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ 200 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ.
ಇನ್ನು ಉಗ್ರ ಹಫೀಜ್ ಸಯ್ಯೀದ್ ನ ಜಮಾತ್ ಉದ್ ದವಾ ಸಂಘಟನೆಯನ್ನು ಅಮೆರಿಕ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿರುವ ಹಿನ್ನಲೆಯಲ್ಲಿ ತಂತ್ರಗಾರಿಕೆ ರೂಪಿಸಿದ್ದ ಹಫೀಜ್ ಸಯ್ಯೀದ್ ಮಿಲ್ಲಿ ಮುಸ್ಲಿಂ ಲೀಗ್ ಎಂಬ ಸಂಘಟನೆ ಸ್ಥಾಪನೆ ಮಾಡಿ ಅದರ ಮೂಲಕ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲು ಉಪಾಯ ಮಾಡಿದ್ದ. ಆದರೆ ಮಿಲ್ಲಿ ಮುಸ್ಲಿಂ ಲೀಗ್ ಹೆಸರಿಗೂ ಪಾಕಿಸ್ತಾನ ಚುನಾವಣಾ ಆಯೋಗ ಈ ವರೆಗೂ ಮಾನ್ಯತೆ ನೀಡಿಲ್ಲ.
ಹೀಗಾಗಿ ಅಲ್ಲಾಹು ಅಕ್ಬರ್ ತೆಹ್ರೀಕ್ ಎಂಬ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಫೀಜ್ ಸಯ್ಯೀದ್ ಆ ಪಕ್ಷದ ಮೂಲಕವೇ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. 
ಈ ಬಗ್ಗೆ ಮಾತನಾಡಿರುವ ಮಿಲ್ಲಿ ಮುಸ್ಲಿಂ ಲೀಗ್ ನ ಅಧ್ಯಕ್ಷ ಸೈಫುಲ್ಲಾ ಖಲೀದ್, ಹಫೀಜ್ ಸೈಯ್ಯೀದ್ ಸಾಹೆಬ್ ಅವರು ಅಂತಹ ಯಾವುದೇ ತಂತ್ರಗಾರಿಕೆ ರೂಪಿಸಿಲ್ಲ, ಎಎಟಿ ಪಕ್ಷದ ಮುಖಾಂತರ ಎಂಎಂಎಲ್ ಮುಖಂಡರು ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ.  ತಮ್ಮ ಪಕ್ಷ ಸುಮಾರು 200 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ.
SCROLL FOR NEXT