ವಿದೇಶ

ಭಾರತಕ್ಕೆ ವಿನಾಶಕಾರಿ ಅಪಾಚೆ ಹೆಲಿಕಾಪ್ಟರ್ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ

Srinivasamurthy VN
ವಾಷಿಂಗ್ಟನ್: ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿಸುವ ಭಾರತದ ಪ್ರಸ್ತಾಪಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.
ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಸಂಸ್ಥೆ ಈ ಅಪಾಚೆ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದ್ದು, ಈ ಹಿಂದಿನ ಒಪ್ಪಂದದಂತೆ ಭಾರತಕ್ಕೆ 6 ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ಗಳನ್ನು ಮಾರಾಟ  ಮಾಡಲು ಮುಂದಾಗಿತ್ತು. ಆದರೆ ಈ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಈವರೆಗೂ ಅನುಮೋದನೆ ನೀಡಿರಲಿಲ್ಲ. ಇದೀಗ ಒಪ್ಪಂದದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡ ಕಾರಣ ಅಮೆರಿಕ ಸರ್ಕಾರ ಹೆಲಿಕಾಪ್ಚರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಒಪ್ಪಿಗೆ ನೀಡಿದೆ. ಬೋಯಿಂಗ್ ಅಂತಾರಾಷ್ಟ್ರೀಯ ಗ್ರಾಹಕರಿಗೆ ಈ ವರೆಗೂ 2,200ಕ್ಕೂ ಅಧಿಕ ಅಪಾಚೆ ಹೆಲಿಕಾಪ್ಟರ್ ಗಳನ್ನು ಪೂರೈಸಿದೆ.
ಈ ಬಗ್ಗೆ ಅಮೆರಿಕ ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಅಮೆರಿಕದ ಆಪ್ತ ರಾಷ್ಟ್ರಗಲ್ಲಿ ಒಂದಾಗಿರುವ ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ ಗಳನ್ನು ನೀಡಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಭಾರತ-ಅಮೆರಿಕ ನಡುವಿನ ಸೇನಾ ಕಾರ್ಯತಂತ್ರ ಒಪ್ಪಂದದ ಅನ್ವಯ ಭಾರತಕ್ಕೆ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳು ಸೇರಿದಂತೆ ಹಲವು ಯುದ್ಧ ಸಾಮಗ್ರಿಗಳನ್ನು ಪೊರೈಕೆ ಮಾಡಲು ಅಮೆರಿಕ ಸಿದ್ಧವಿದೆ. ಇನ್ನು ಕಳೆದ ವರ್ಷ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸದ ವೇಳೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಈ ವೇಳೆ  ಸಿ-17 ಗ್ಲೋಬ್ ಮಾಸ್ಟರ್ 3 ಕಾರ್ಯತಂತ್ರ ವಾಯುಶುದ್ಧೀಕರಣ ಸಾಧನಗಳು, ಎಂ-777 ಅತಿ ಲಘು ಹೊವಿಟ್ಜರ್​ಗಳು, ಸಿ130ಜೆ ಸೂಪರ್ ಹರ್ಕ್ಯುಲಿಸ್ ವಿಮಾನ ಗಳು, ಅಪಾಚೆ ದಾಳಿ ಮತ್ತು 15 ಚಿನೂಕ್ ಏರ್​ಲಿಫ್ಟ್ ಹೆಲಿಕಾಪ್ಟರ್​ಗಳು, ಪಿ-8ಐ ನೌಕಾಪಡೆ ಗಸ್ತು ಯುದ್ಧ ವಿಮಾನಗಳಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು.
2017ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ನಿರ್ಮಾಣ ಮಾಡುತ್ತಿರುವ ಬೋಯಿಂಗ್ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಸುಮಾರು 4,168 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದು, ಇಂತಹ ಆರು ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಹಲವು ವರ್ಷಗಳ ಹಿಂದೆಯೇ ಸೇನೆ ಯುದ್ಧ ಹೆಲಿಕಾಪ್ಟರ್ ಗಳ ಕೊರತೆ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿತ್ತು. ಮೂರು ವರ್ಷಗಳ ಹಿಂದೆ 39 ಹೆಲಿಕಾಪ್ಟರ್‌ ಗಳನ್ನು ಖರೀದಿಸಲು ಬಯಸಿತ್ತು.  ಆದರೆ ದೇಶೀಯ ಯುದ್ಧ ಹೆಲಿಕಾಪ್ಟರ್  ಗಳ ಬಳಕೆಗೆ ಮುಂದಾಗಿದ್ದ ವಾಯುಸೇನೆ ಈ ಖರೀದಿಗೆ ವಿರೋಧ ವ್ಯಕ್ಚಪಡಿಸಿತ್ತು. 
SCROLL FOR NEXT