ಲಾಹೋರ್: ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವುದು ಉಗ್ರ ಸಂಘಟನೆಗಳಿಗೂ ಭಯ ಮೂಡಿಸಿದೆ. ಈ ಬೆನ್ನಲ್ಲೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕರೆ ನೀಡಿದ್ದಾನೆ.
ಲಾಹೋರ್ ನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಹಫೀಜ್ ಸಯೀದ್, ಹೊಸದೊಂದು ಯುಗ ಪ್ರಾರಂಭವಾಗಿದ್ದು ದೇವರ ಆಶೀರ್ವಾದದಂತೆ ಕಾಶ್ಮೀರ ಸ್ವಾತಂತ್ರ್ಯ ಪಡೆಯಲಿದೆ. ಕಾಶ್ಮೀರದಲ್ಲಿ ರಕ್ತಪಾತವಾಗಿದ್ದು, ಇವೆಲ್ಲವನ್ನೂ ಗಮನಿಸುತ್ತಿರುವ ದೇವರು ತೀರ್ಪು ನೀಡಲಿದ್ದಾನೆ. ಏಕೆಂದರೆ ಎಲ್ಲಾ ನಿರ್ಧಾರವಾಗುವುದು ಸ್ವರ್ಗದಲ್ಲಿ ವಾಷಿಂಗ್ ಟನ್ ನಲ್ಲಿ ಅಲ್ಲ, ಆದ್ದರಿಂದ ಕಾಶ್ಮೀರ ಶೀಘ್ರವೇ ಸ್ವಾತಂತ್ರ್ಯ ಪಡೆಯಲಿದೆ ಎಂದು ಹೇಳಿದ್ದಾನೆ.
ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಉಗ್ರ ಸಂಘಟನೆ ಹೆಚ್ಚಿನ ಪ್ರಮಾಣದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದು, ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಯುವಕರಿಗೆ ಉತ್ತೇಜನ ನೀಡುತ್ತಿದ್ದಾನೆ. ಕಾಶ್ಮೀರದಲ್ಲಿ ಸೇನೆ ವಿರುದ್ಧ ಹೋರಾಡುತ್ತಿದ್ದ ಹಲವರು ಜೀವ ಕಳೆದುಕೊಂಡಿದ್ದಾರೆ. ಸಾಯುವ ವೇಳೆಯಲ್ಲಿಯೂ ಸಹ ಅವರು ಪಾಕಿಸ್ತಾನದ ಸಮಗ್ರತೆ ಹಾಗೂ ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ. ಕಾಶ್ಮೀರದ ಸ್ವಾತಂತ್ರ್ಯ ದೇವರ ನಿರ್ಣಯವಾಗಿದ್ದು ಅದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ತಡೆಯಲು ಸಾಧ್ಯವಿಲ್ಲ ಎಂದು ಸಯೀದ್ ಹೇಳಿದ್ದಾರೆ.